ಉಡುಪಿ: ಶ್ರೀ ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿದ್ದು ಸೂಕ್ತ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು. ಅನಂತರ ಇತರ ಭಾಷೆ, ಒಂದು ಧಾರ್ಮಿಕ ಸಂಸ್ಥೆಯು ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ.ನಾಮ ಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ಪಷ್ಟ ಉಲ್ಲಂಘನೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ.
ಸಮಾಜಕ್ಕೆ ಮಾರ್ಗದರ್ಶನ ಮಾಡುವವರೇ ಇಂತಹ ಕುಚೋದ್ಯದ ಕೆಲಸಕ್ಕೆ ಕೈ ಹಾಕಿರುವುದು ಕ್ಷಮಿಸಲಾಗದ ಅಪರಾಧ. ಸಂಬಂಧಪಟ್ಟವರು ತಕ್ಷಣ ಇದನ್ನು ಸರಿಪಡಿಸಬೇಕು. ಇದು ಕನ್ನಡ ಸಾಹಿತ್ಯ ಪರಿಷತ್ ನ ಹಕ್ಕೊತ್ತಾಯ. ನಾಮಫಲಕ ದಲ್ಲಿ ಕನ್ನಡ ಭಾಷೆ ತೆಗೆದು ತುಳು ಭಾಷೆ ಹಾಕಿದ್ದು ಸರಿಯಲ್ಲ. ಬೇರೆ ಭಾಷೆಯನ್ನು ಬಳಸುವಾಗ ಮೊದಲು ಕನ್ನಡ ವನ್ನೇ ಬಳಸಬೇಕು. ಮೊದಲು ಕನ್ನಡ, ಬಳಿಕ ಇತರ ಭಾಷೆ ನಾಮಫಲಕದಲ್ಲಿರಲಿ. ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವುದನ್ನೂ ಸಹ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.
Kshetra Samachara
01/12/2020 11:37 am