ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂನಿಂದ ನಡೆಸಲ್ಪಡುತ್ತಿದ್ದ, ನೂರಾರು ಮಹಿಳೆಯರಿಗೆ ವರದಾನವಾಗಿದ್ದ ವಂಡ್ಸೆಯ ಸ್ವಾವಲಂಬನಾ ಹೊಲಿಗೆ ವೃತ್ತಿ ತರಬೇತಿ ಕೇಂದ್ರವನ್ನು ರಾತ್ರೋರಾತ್ರಿ ಮುಚ್ಚಿಸಿರುವುದು ಅಕ್ಷಮ್ಯ. ಕ್ಷೇತ್ರದ ಶಾಸಕರು ಅಧಿಕಾರಿಗಳಿಗೆ ಒತ್ತಡ ಹೇರಿ ಪಂಚಾಯತ್ ರಾಜ್ ಕಾಯ್ದೆ ಗಾಳಿಗೆ ತೂರಿ ಸ್ವಾವಲಂಬಿಯಾಗಿ ಬದುಕುತ್ತಿರುವ ಮಹಿಳೆಯರನ್ನು ಬೀದಿಗೆ ತಳ್ಳಿರುವುದು ಖಂಡನೀಯ ಎಂದು ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ವಂಡ್ಸೆಯ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿರುವುದನ್ನು ಖಂಡಿಸಿ, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಮತ್ತು ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾ. ಸಮಿತಿ ಕುಂದಾಪುರ ಆಶ್ರಯದಲ್ಲಿ ಸೋಮವಾರ ಕಟ್ಬೆಲ್ತೂರು ಗ್ರಾಪಂ ಬಳಿ ನಡೆದ ಸರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಉದಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ವಂಡ್ಸೆ ಪಂಚಾಯತ್ ಮಾದರಿ ಪಂಚಾಯತ್ ಆಗಿ ರೂಪುಗೊಂಡಿದೆ. ಸ್ವಚ್ಛತೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ. ಇಲ್ಲಿ ಆಡಳಿತ ನಡೆಸುತ್ತಿರುವವರು ಕಾಂಗ್ರೆಸ್ ನವರು ಎಂಬ ಒಂದೇ ವಿಚಾರಕ್ಕೆ ಈ ರೀತಿ ಶಾಸಕರು ದ್ವೇಷ ರಾಜಕಾರಣ ಮಾಡಲು ಹೊರಟಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವುದು ಶಾಸಕರ ಕರ್ತವ್ಯ. ಕಳೆದ ಬಾರಿ ಮತ ಕೇಳುವಾಗ ಏರ್ ಪೋ ರ್ಟ್, ಮೆಡಿಕಲ್ ಕಾಲೇಜು, ಐದು ನದಿಗಳ ಜೋಡಣೆ ಮಾಡುತ್ತೇನೆಂದ ಆಶ್ವಾಸನೆ ನೀಡಿರುವ ಶಾಸಕರು, ಇದೀಗ ಎರಡುವರೆ ವರ್ಷ ಕಳೆದರೂ ಕೊಟ್ಟ ಆಶ್ವಾಸನೆ ಈಡೇರಿಸದೆ ವಚನಭ್ರಷ್ಟರಾಗಿದ್ದಾರೆ.
ನಮ್ಮ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನೊಂದ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಬೈಂದೂರು ಕ್ಷೇತ್ರ, ಕುಂದಾಪುರ ಕ್ಷೇತ್ರ, ಜಿಲ್ಲಾ ಮಟ್ಟದವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಎಚ್ಚರಿಸಿದರು.
Kshetra Samachara
20/10/2020 11:41 am