ಬಜಪೆ: ಶ್ರೀ ಕ್ಷೇತ್ರ ಪೆರಾರದ ಪವಿತ್ರ ಕಾರಣೀಕದ ನೆಲೆ, ವಾಕ್ ದೋಷ ನಿವಾರಣಾ ಕೇಂದ್ರವಾದ ಬಂಟಕಂಬ ರಾಜಾಂಗಣದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಬಂಟಕಂಬಕ್ಕೆ ಬೇಕಾದ ಮರವನ್ನು ಕ್ಷೇತ್ರಕ್ಕೆ ತರುವ ವ್ಯವಸ್ಥೆಯ ಬಗ್ಗೆ ಊರಿನ ಗ್ರಾಮಸ್ಥರ ಹಾಗೂ ಕ್ಷೇತ್ರದ ಭಕ್ತರ ಸಮಾಲೋಚನಾ ಸಭೆಯು ಪೆರಾರ ದೇವಸ್ಥಾನದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಹಾಗೂ ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಮಾತನಾಡಿ, ಪೆರಾರ ಕ್ಷೇತ್ರದ ಜಿರ್ಣೋದ್ದಾರಕ್ಕೆ ಯಾವುದೇ ಸಂಪನ್ಮೂಲದ ಕೊರತೆಯಾಗಬಾರದು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸಚಿವೆ ಶಶಿಕಲಾ ಅವರ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು,10 ಲಕ್ಷ ರೂ ಮಂಜೂರಾತಿಗೆ ಒಪ್ಪಿದ್ದಾರೆ. ಮುಖ್ಯಮಂತ್ರಿಗಳ ನಿಧಿಯಿಂದ 5 ಲಕ್ಷ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಸಹಕಾರವನ್ನು ನೀಡುತ್ತೇನೆ.ಗ್ರಾಮದ ಹಾಗೂ ಮಾಗಣೆಯ ಪ್ರತಿಯೊಬ್ಬರ ಸಹಕಾರವೂ ಮುಖ್ಯ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಪೆರಾರ ಶ್ರೀ ಬಲವಾಂಡಿ ದೈವಸ್ಥಾನದ ಬಂಟಕಂಬ ರಾಜಾಂಗಣದ ಜೀರ್ಣೋದ್ದಾರಕ್ಕೆಈಗಾಗಲೇ ಸಂಕಲ್ಪ ಮಾಡಲಾಗಿದ್ದು, ಬಂಟಕಂಬದ ಮರಕ್ಕೆ ಸುಳ್ಯ ತಾಲೂಕಿನ ಮಂಡೆಕೋಲು ಎಂಬಲ್ಲಿ ಸಾಂಪ್ರದಾಯಿಕವಾಗಿ ಮುಹೂರ್ತ ನಡೆದಿದೆ. ಬಂಟಕಂಬಕ್ಕೆ ಬೇಕಾದ ಕರಡಿಮರವನ್ನು ಸುಳ್ಯ ತಾಲೂಕಿನ ಮಂಡೆಕೋಲು ಎಂಬಲ್ಲಿ ಗುರುತಿಸಿ ಸರಕಾರದ ಮಟ್ಟದಲ್ಲಿ ಅರಣ್ಯ ಇಲಾಖೆಯಿಂದ ಅಧಿಕೃತ ಅನುಮತಿಯನ್ನು ಪಡೆಯಲಾಗಿದೆ ಎಂದು ಪೆರಾರ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್ ಚೌಟ ಹೇಳಿದರು.
ಪೆರಾರ ಕ್ಷೇತ್ರದ ಪೆರ್ಗಡೆಯವರಾದ ಮುಂಡಬೆಟ್ಟು ಗಂಗಾಧರ ರೈ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.ಈ ಸಂದರ್ಭ ವಿಜಯಪ್ರಕಾಶ್ ಮಲ್ಲಿ ಪ್ರಾಣಿಬೆಟ್ಟುಗುತ್ತು, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಡಾ. ಮೋಹನ್‌ದಾಸ್ ರೈ, ಶೇಖರ ಸಪಳಿಗ, ವಿದ್ಯಾ ಜೋಗಿ, ಕಾಶಿನಾಥ್ ಕಾಮತ್, ಹರೀಶ್ ಶೆಟ್ಟಿ, ಪ್ರತೋಷ್ ಮಲ್ಲಿ ಅವರುಗಳು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸುರೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
27/10/2021 10:01 pm