ಕಾಪು: ಕಳತ್ತೂರು ಬರ್ಪಾಣಿ ದಿ. ರಘುರಾಮ ಶೆಟ್ಟಿ ಅವರ ಪುತ್ರ, ಕಾಪು ಮಯೂರ ಹೋಟೆಲ್‌ನ ಮಾಲೀಕ ಸಂತೋಷ್ ಆರ್. ಶೆಟ್ಟಿ (51) ಅವರು ಸೆ. 28ರಂದು ಅನಾರೋಗ್ಯದಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ನಾಲ್ಕು ಮಂದಿ ಸಹೋದರ- ಮೂರು ಮಂದಿ ಸಹೋದರಿಯರನ್ನು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಹೋಟೆಲ್ ಉದ್ಯಮಿಯಾಗಿ ಕಳೆದ 27 ವರ್ಷಗಳಿಂದ ಮಯೂರಾ ಹೋಟೆಲ್ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದ ಅವರು, ಸಮಾಜ ಸೇವಾಸಕ್ತರಾಗಿದ್ದು ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕೊರೊನಾ ಲಾಕ್‌ಡೌನ್ ಸಂದರ್ಭಗಳಲ್ಲಿ ಸಮಾಜದ ಬಡ ವರ್ಗದ ಜನರ ನೋವಿಗೆ ಸ್ಪಂದಿಸಿ ವಿವಿಧ ಸಹಕಾರ ನೀಡಿದ್ದ ಅವರು ತಮ್ಮ ಹೋಟೆಲ್‌ನ ಸಿಬ್ಬಂದಿ ಮತ್ತು ಅವರ ಕುಟುಂಬದವರ ಕಷ್ಟದ ಪರಿಸ್ಥಿತಿಯನ್ನು ನೋಡಿ ಅವರಿಗೆ ಪಡಿತರ ಕಿಟ್ ಮತ್ತು ಆರ್ಥಿಕ ಧನಸಹಾಯ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ಗಣ್ಯರ ಸಂತಾಪ : ಹೋಟೆಲ್ ಉದ್ಯಮಿ ಸಂತೋಷ್ ಆರ್. ಶೆಟ್ಟಿ ಅವರ ನಿಧನಕ್ಕೆ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ, ಯಶಪಾಲ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ನವೀನ್ ಚಂದ್ರ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
Kshetra Samachara
28/09/2021 09:38 pm