ಕಾರ್ಕಳ: ಬೆಳ್ಮಣ್‌ನ ಜಂತ್ರ ಪರಿಸರದ ಗುಡ್ಡದಲ್ಲಿ ಖಾಸಗಿ ಏಜೆನ್ಸಿಯೊಂದು ಒಂದು ವಾರದಿಂದ ಅನಧಿಕೃತವಾಗಿ ಸರ್ವೇಯಲ್ಲಿ ತೊಡಗಿರುವುದು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಹಾಗೂ ಗ್ರಾಮಕರಣಿಕರಿಗೂ ಯಾವುದೇ ಮಾಹಿತಿ ಇಲ್ಲ. ಗ್ರಾಮಸ್ಥರು ಸರ್ವೇ ನಿರತರಲ್ಲಿ ವಿಚಾರಿಸಿದಾಗ ಕೇಂದ್ರ ಸರಕಾರದ ಜಿಲೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ ಅಡಿ ನೆಲದ ಗುರುತ್ವ ಮತ್ತು ಕಾಂತೀಯ ಸರ್ವೇ ಕಾರ್ಯ ಇದಾಗಿದೆ ಎಂದು ತಿಳಿಸಿದ್ದಾರೆ.
ಸರ್ವೇ ನಡೆಸುವವರಿಗೆ ಸಹಕರಿಸುವಂತೆ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಕಂದಾಯ ಅಧಿಕಾರಿಗಳಿಗೆ ಅಪಾರ ಜಿಲ್ಲಾಧಿಕಾರಿ ನೀಡಿರುವ ಪತ್ರವೂ ಅವರ ಬಳಿ ಇದ್ದು ಮಹಾರಾಷ್ಟ್ರ ನಾಗುರದ ಮಿನರಲ್ ಎಕ್ಸ್‌ಪ್ಲೋರೇಶನ್ ಹಾಗೂ ಕನ್ಸಲ್ಟನ್ಸಿ ಲಿಮಿಟೆಡ್ ಖಾಸಗಿ ಸಂಸ್ಥೆಯ ಸಿಬ್ಬಂದಿ ಎಂದು ತಿಳಿದುಬಂದಿದೆ.
ಬೆಳ್ಮಣ್ ಲಾಡ್ಜ್ ನಲ್ಲಿ ಅವರು ತಂಗಿದ್ದಾರೆ. 8, 10 ಮಂದಿಯ ತಂಡವಾಗಿ ಅವರ ನಡೆ ಸಂಶಯ ಉಂಟು ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಉಡುಪಿಯ ಕೆಲವು ಕಡೆಗಳಲ್ಲಿ ಈಗಾಗಲೇ ಈ ತಂಡ ಸರ್ವೇ ಪೂರೈಸಿದೆ. ಶಿರ್ವ ಬಂಟಕಲ್ಲು ಭಾಗದಲ್ಲಿ ಸರ್ವೇಗೆ ತೊಡಗಿದಾಗ ಗ್ರಾಮಸ್ಥರು ವಿರೋಧ ಮಾಡಿದ್ದರಿಂದ ಕಾಲ್ಕಿತ್ತ ತಂಡ ಬೆಳ್ಮಣ್ ನಲ್ಲಿ ಸರ್ವೇಗೆ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಬೆಳ್ಮಣ್‌ನಲ್ಲಿ ನಡೆಯುವ ಸರ್ವೇ ಬಗ್ಗೆ ಈವರೆಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಪಡೆದು ಬಳಿಕ ಸ್ಪಷ್ಟ ಮಾಹಿತಿ ನೀಡುವೆ. ಎಂದಿದ್ದಾರೆ.
ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಪ್ರತಿಕ್ರಿಯಿಸಿ ನನಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಚಾರಿಸಿಕೊಂಡು ನಾಳೆ ತಿಳಿಸುವೆ. ಎಂದು ಹೇಳಿದ್ದಾರೆ.
Kshetra Samachara
27/07/2022 07:45 pm