ಬೆಳ್ತಂಗಡಿ: ತೀವ್ರವಾದ ಮೆದುಳು ರಕ್ತಸ್ರಾವವಾಗಿ ಗಂಭೀರವಾದ ಆರೋಗ್ಯ ಸಮಸ್ಯೆಯಲ್ಲಿ ಬಳಲುತ್ತಿದ್ದ ಅಂಬೇಡ್ಕರ್ ವಾದಿ, ಬಹುಜನ ಚಳುವಳಿಯ ಹಿರಿಯ ಮುಖಂಡ ಪಿ.ಡೀಕಯ್ಯ(63) ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸಿದ ಹೆಗ್ಗಳಿಕೆ ಡೀಕಯ್ಯರವರದ್ದಾಗಿದೆ. ಪಿ.ಡೀಕಯ್ಯ ಉತ್ತಮ ಬರಹಗಾರರಾಗಿದ್ದು, ತುಳುನಾಡಿನ ಆದಿ ದ್ರಾವಿಡ ಜನಾಂಗದ ಅವಳಿ ವೀರರಾದ ಕಾನದ - ಕಟದರ ಬಗ್ಗೆ ಜಾನಪದೀಯ ಅಧ್ಯಯನವನ್ನು ನಡೆಸಿದ್ದರು. ಹಲವಾರು ಪತ್ರಿಕೆಗಳಿಗೆ ನಿರಂತರವಾಗಿ ಅವರು ಬರೆಯುತ್ತಿದ್ದರು. ಬಿಎಸ್ಎನ್ಎಲ್ ನ ನಿವೃತ್ತ ಉದ್ಯೋಗಿಯಾಗಿದ್ದ ಪಿ.ಡೀಕಯ್ಯ ಅವರು ಮನ್ಸ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ, ಕುಟುಂಬ ವರ್ಗದವರು, ಅಪಾರ ಬೆಂಬಲಿಗರನ್ನು ಅಗಲಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪಿ.ಡೀಕಯ್ಯನವರ ಕುಟುಂಬ ಅವರ ಅಂಗಾಂಗಗಳನ್ನು ದಾನ ಮಾಡಿ ಹಲವರ ಬಾಳಿಗೆ ಬೆಳಕಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಂಗಾಂಗ ದಾನಗಳ ಪ್ರಕ್ರಿಯೆ ನಡೆಯುತ್ತಿದೆ.
Kshetra Samachara
08/07/2022 03:44 pm