ನೆಲ್ಯಾಡಿ: ಹೆರಿಗೆ ಬಳಿಕ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಿರಾಡಿಯ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಜೂ.17ರಂದು ಸಂಜೆ ನಡೆದಿದೆ.
ಶಿರಾಡಿ ಗ್ರಾಮದ ಅಡ್ಡಹೊಳೆ ನಿವಾಸಿ, ಗುಂಡ್ಯದಲ್ಲಿ ಕ್ಯಾಂಟಿನ್ ಹೊಂದಿರುವ ವಿಶ್ವನಾಥ ಎಂಬವರ ಪತ್ನಿ ಶೀಲಾವತಿ(32ವ.)ಸಾವನ್ನಪ್ಪಿದ ದುರ್ದೈವಿ ಮಹಿಳೆಯಾಗಿದ್ದಾರೆ. ಶೀಲಾವತಿಯವರಿಗೆ ಜೂ.7ರಂದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಹಾಗೂ ತಾಯಿ ಆರೋಗ್ಯದಿಂದ್ದು ಜೂ.11ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು.
ಮನೆಗೆ ಹೋದ ಬಳಿಕ ಅವರಿಗೆ ಕೆಮ್ಮು, ಕಫ ಹಾಗೂ ತುಸು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.13ರಂದು ಮತ್ತೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿ ಚೇತರಿಸಿಕೊಳ್ಳದೇ ಇದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಜೂ.17ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೀಲಾವತಿಯವರು ಚಿಕಿತ್ಸೆಗೆ ಸ್ಪಂದಿಸದೆ ಜೂ.18ರಂದು ಸಂಜೆ ವೇಳೆಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರು ಪತಿ ವಿಶ್ವನಾಥ ಹಾಗೂ 10 ದಿನದ ಹೆಣ್ಣು ಮಗುವನ್ನು ಅಗಲಿದ್ದಾರೆ.
ವಿಶ್ವನಾಥ ಹಾಗೂ ಶೀಲಾವತಿಯವರಿಗೆ ಮೂರುವರೇ ವರ್ಷದ ಹಿಂದೆ ಮದುವೆಯಾಗಿದ್ದು ಶೀಲಾವತಿಯವರು ಈ ಹಿಂದೆ ಎರಡು ಬಾರಿ ಗರ್ಭಿಣಿಯಾಗಿದ್ದು ಎರಡು ಬಾರಿಯೂ ಮಗು ಅವರ ಹೊಟ್ಟೆಯಲ್ಲಿಯೇ ಸಾವನ್ನಪ್ಪಿತ್ತು. ೩ನೇ ಬಾರಿ ಅವರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಮಗು ಹೊರ ತೆಗೆಯಲಾಗಿತ್ತು. ಇದೀಗ ಮಗು ಆರೋಗ್ಯವಾಗಿದ್ದರೂ ತಾಯಿ ಸಾವನ್ನಪ್ಪಿರುವುದು ವಿಶ್ವನಾಥ ಕುಟುಂಬಕ್ಕೆ ಅಘಾತ ಉಂಟು ಮಾಡಿದೆ.
Kshetra Samachara
18/06/2022 12:08 pm