ಬೆಳ್ತಂಗಡಿ : ಬೃಹತ್ ಗಾತ್ರದ ಎರಡು ಕಾಳಿಂಗ ಸರ್ಪ ರಕ್ಷಣೆ ಮಾಡುವ ಮೂಲಕ ಒಟ್ಟು 200 ಕಾಳಿಂಗ ಸರ್ಪ ರಕ್ಷಣೆ ಮಾಡುವಲ್ಲಿ ಸ್ನೇಕ್ ಅಶೋಕ್ ಲಾಯಿಲ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಉಷಾ ಎಂಬವರ ಮನೆಯಲ್ಲಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಬಂದಿದ್ದು ತಕ್ಷಣ ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆಳದಂಗಡಿ ಅರಣ್ಯಾಧಿಕಾರಿ ಸುರೇಶ್ ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಬೆಳ್ತಂಗಡಿ ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಹಿಡಿದು ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬೀಡಲು ಅರಣ್ಯ ಇಲಾಖೆ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಲಾಯಿಲ ಗ್ರಾಮದ ಕಾಶಿಬೆಟ್ಟು ಪ್ರಗತಿನಗರದ ವೆಂಕಪ್ಪ ಎಂಬುವರ ಮನೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಹೆಬ್ಬಾವನ್ನು ನುಂಗಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಕಂಡಿತ್ತು. ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿದಾಗ ವಾಪಸ್ ಕಾಶಿಬೆಟ್ಟುಗೆ ಬಂದು ಕಾಳಿಂಗ ಸರ್ಪ ಗೂಹೆಗೆ ನುಗ್ಗುತ್ತಿತ್ತು. ತಕ್ಷಣ ಹೊರತೆಗೆದು ಹಿಡಿದು ಎರಡು ಕಾಳಿಂಗ ಸರ್ಪವನ್ನು ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಿಟ್ಟಿದ್ದಾರೆ.
37 ವರ್ಷ ಪ್ರಾಯದ ಅಶೋಕ್ ಲಾಯಿಲ ಅವರು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿನ್ನಿಕಲ್ಲು ಮನೆಯ ಆನಂದ ಪೂಜಾರಿ ಮತ್ತು ಕುಸುಮ ದಂಪತಿಯ ಎರಡನೇ ಮಗ. ಪಿಯುಸಿ ವರೆಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಉಜಿರೆಯಲ್ಲಿ ಎರಡು ವರ್ಷಗಳ ಕಾಲ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ರಾಜ್ಯದ ಪ್ರಸಿದ್ಧ ಊರಗ ಪ್ರೇಮಿಗಳಲ್ಲಿ ಒಬ್ಬರಾದ ಉಜಿರೆಯ ಸ್ನೇಕ್ ಜೋಯ್ ಜೊತೆ ಶಿಷ್ಯನಾಗಿ 2010ರಿಂದ ಹಾವಿನ ರಕ್ಷಣೆಯಲ್ಲಿ ತೊಡಗಿಸಿಕೊಂಡರು. ಇವರಿಗೆ 2018ರಲ್ಲಿ ಲಾಯಿಲ ರಾಘವೇಂದ್ರ ಮಠ ಬಳಿ ಮನೆಯೊಂದಲ್ಲಿ ನಾಗರಹಾವು ರಕ್ಷಣೆ ವೇಳೆ ಕಾಲಿಗೆ ಹಾವು ಕಚ್ಚಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಇದ್ದು ಕೊನೆಗೆ ಬದುಕಿ ಬಂದು ಹಾವಿನ ರಕ್ಷಣೆಯಲ್ಲಿ ತೊಡಗಿಕೊಂಡಿದ್ದರು. ಕಳೆದ 12 ವರ್ಷಗಳಿಂದ ಒಟ್ಟು ವಿವಿಧ ರೀತಿಯ 8,000 ಹಾವು ರಕ್ಷಣೆ ಮಾಡಿದ್ದಾರೆ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿಗಳು ಲಭಿಸಿದ್ದು, ಶಾಲಾ ಕಾಲೇಜಿಗಳಿಗೆ ಹಾವಿನ ಬಗ್ಗೆ ಮಾಹಿತಿ ಕಾರ್ಯಗಾರ ನೀಡಲು ಕೂಡ ಹೋಗುತ್ತಾರೆ.
ರಾಜ್ಯದ ಪ್ರಸಿದ್ಧ ಊರಗ ರಕ್ಷಕರಲ್ಲಿ ಒಬ್ಬರಾದ ಉಜಿರೆಯ ಸ್ನೇಕ್ ಜೋಯ್ ಅವರ ಶಿಷ್ಯರಾಗಿರುವ ಸ್ನೇಕ್ ಅಶೋಕ್. ಗುರುವಾಗಿರುವ ಸ್ನೇಕ್ ಜೋಯ್ ಕೂಡ ಇತ್ತೀಚೆಗೆ "222" ಕಾಳಿಂಗ ಸರ್ಪ ಹಿಡಿದು ಸುದ್ದಿಯಾಗಿದ್ದರು. ಅವರು ಕೂಡ ಒಟ್ಟು 9,500ಕ್ಕೂ ಅಧಿಕ ಹಾವು ಹಿಡಿದು ರಕ್ಷಣೆ ಮಾಡಿದ್ದಾರೆ. ಈಗ ಅವರ ಶಿಷ್ಯ "200" ಕಾಳಿಂಗ ಸರ್ಪ, ಒಟ್ಟು 8,000 ಹಾವುಗಳನ್ನು ಹಿಡಿದು ರಕ್ಷಣೆ ಮಾಡುವ ಮೂಲಕ ದಾಖಲೆ ಮಾಡಿದ್ದಾರೆ.
PublicNext
21/07/2022 10:13 am