ಮಂಗಳೂರು: ಆಳಸಮುದ್ರ ಬೋಟ್‌ನ ಮೀನುಗಾರರ ಬಲೆಗೆ ಅಪರೂಪದ ಹಾರುವ ಮೀನು ಸಿಕ್ಕಿದೆ. ಬೋಟ್ ನಲ್ಲಿ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳು ದೊರಕಿವೆ ಎಂದು ಮೀನುಗಾರ ಲೋಕೇಶ್ ಬೆಂಗ್ರೆ ಮಾಹಿತಿ ನೀಡಿದ್ದಾರೆ.
ಫ್ಲಯಿಂಗ್ ಫಿಶ್ ಹಾಗೂ ತುಳುವಿನಲ್ಲಿ ಪಕ್ಕಿಮೀನ್ ಎಂದು ಕರೆಯಲ್ಪಡುವ ಈ ಹಾರುವ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವ ಮತ್ಸ್ಯ ಪ್ರಭೇದ. ಈ ಮೀನುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಈ ಮೀನುಗಳು ಹೊಂದಿವೆ.
15ರಿಂದ 45 ಸೆಂ.ಮೀ.ವರೆಗೆ ಉದ್ದ ಬೆಳೆಯುವ ಈ ಮೀನುಗಳು ಮೀನುಗಾರರ ಬಲೆಗೆ ಬೀಳುವುದು ಅಪರೂಪ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತದೆ. ಆದರೆ, ಈ ಮೀನನ್ನು ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎಂದು ಮೀನುಗಾರ ಲೋಕೇಶ್ ಬೆಂಗ್ರೆ ಹೇಳುತ್ತಾರೆ.
PublicNext
19/02/2022 09:26 am