ಮುಲ್ಕಿ: ಮುಲ್ಕಿ ಸಮೀಪದ ಕವತ್ತಾರು ಪದವು ಬಳಿ ನಿನ್ನೆ ಸೋಮವಾರ ತಡ ರಾತ್ರಿ ಚಿರತೆ ಓಡಾಟ ಕಂಡುಬಂದಿದೆ. ಇದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.
ಕವತ್ತಾರು ಕೊಲ್ಲೂರು ಪದವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ಟ್ಯಾಂಕ್ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡಾಟ ಪತ್ತೆಯಾಗಿದೆ.
ಕಳೆದ ಕೆಲವು ದಿನಗಳಿಂದ ಕವತ್ತಾರು ಪರಿಸರದ ಅನೇಕ ಮನೆಗಳ ನಾಯಿಗಳು ಕೂಡ ನಾಪತ್ತೆಯಾಗಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಕವತ್ತಾರು ಆಟೋ ಚಾಲಕ ಕಿಶೋರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಕಿನ್ನಿಗೋಳಿಯ ತಾಳಿಪಾಡಿ ಗುತ್ತು ಸಮೀಪ ಚಿರತೆಯೊಂದನ್ನು ಅರಣ್ಯ ಇಲಾಖೆ ಸಹಾಯದಿಂದ ಸೆರೆ ಹಿಡಿಯಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
25/01/2022 01:54 pm