ಸುಬ್ರಹ್ಮಣ್ಯ: ಕೋಳಿ ಹಿಡಿಯಲು ಬಂದ ಚಿರತೆಯೊಂದು ನಿನ್ನೆ ಬಾವಿಗೆ ಬಿದ್ದಿದ್ದು, ಯಶಸ್ವಿ ಕಾರ್ಯಾಚರಣೆ ಮೂಲಕ ಸಂಜೆ ವೇಳೆಗೆ ಚಿರತೆಯನ್ನು ಬಾವಿಯಿಂದ ರಕ್ಷಿಸಲಾಗಿದೆ.
ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರ ಕೋಳಿಯನ್ನು ಬೇಟೆಯಾಡಲೆಂದು ಬಂದ ಚಿರತೆ, ಕೊಂಬಾರಿನ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಅವರ ಮನೆ ಮುಂಭಾಗದ ಬಾವಿಗೆ ಬಿದ್ದಿತ್ತು. ಬಾವಿಯಿಂದ ನೀರು ಸೇದಲೆಂದು ತೆರಳಿದ ವೇಳೆ ಚಿರತೆ ಕಾಣಿಸಿದ್ದು, ಈ ವಿಚಾರ ತಿಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದರು.
ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಬೋನು ತರಿಸಿ ಸೂಕ್ತ ಭದ್ರತೆಯೊಂದಿಗೆ ಸಂಜೆ ವೇಳೆಗೆ ಚಿರತೆಯ ರಕ್ಷಣಾ ಕಾರ್ಯ ಆರಂಭಿಸಿದರು. ಬೋನು ತಂದು ಬಾವಿ ಕಟ್ಟೆಯ ಸಮೀಪ ಇಟ್ಟು ಬಾವಿ ಮೇಲಿನ ಭಾಗಕ್ಕೆ ಬಲೆ ಹಾಸಿ ಏಣಿ ಇಳಿಸಲಾಗಿದ್ದು, ಏಣಿ ಮೂಲಕ ಮೇಲೆ ಹತ್ತಿದ ಚಿರತೆ ನೇರವಾಗಿ ಬೋನಿಗೆ ಬಿದ್ದಿದೆ. ಈ ರೀತಿ ಊರವರ ಸಹಕಾರದೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.
Kshetra Samachara
08/11/2021 02:37 pm