ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದ್ದು ಕೆಲಕಡೆ ಕೃತಕ ನೆರೆ ಉಂಟಾಗಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಮುಲ್ಕಿ ತಾಲೂಕು ವ್ಯಾಪ್ತಿಯ ಪಡುಪಣಂಬೂರು ಗ್ರಾಮ ಪಂಚಾಯತ್ ತೋಕೂರು ನಲ್ಲಿ ಮನೆ ಕುಸಿದು ವೃದ್ಧೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರನ್ನು 70 ವರ್ಷದ ಉಮ್ಮಕ್ಕ ಎಂದು ಗುರುತಿಸಲಾಗಿದೆ.
ಕುಸಿದ ಮನೆ ಶೋಭಾ ಎಂಬವರಿಗೆ ಸೇರಿದ್ದಾಗಿದ್ದು ಮನೆಯಲ್ಲಿ ಆರು ಜನ ವಾಸವಾಗಿದ್ದರು. ಶನಿವಾರ ಬೆಳಗಿನ ಜಾವ ಏಕಾಏಕಿ ಮನೆ ಕುಸಿದು ಐದು ಜನ ಪವಾಡಸದೃಶ ಪಾರಾಗಿದ್ದು ಶೋಭಾರವರ ತಾಯಿ ಉಮ್ಮಕ್ಕ ಎಂಬವರಿಗೆ ಮನೆಯ ಮಾಡು ಬಿದ್ದು ಗಂಭೀರ ಗಾಯಗಳಾಗಿವೆ
ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಪಂ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಮನೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತೀವ್ರ ಬಡತನದಲ್ಲಿ ಕೂಲಿ ಹಾಗೂ ಬೀಡಿಕಟ್ಟಿ ಜೀವನ ಸಾಗಿಸುತ್ತಿರುವ ಕುಟುಂಬ ಮನೆ ಕುಸಿತದಿಂದ ಕಂಗಾಲಾಗಿದೆ.
ಉಳಿದಂತೆ ಹಳೆಯಂಗಡಿ ಹೆದ್ದಾರಿ ಜಂಕ್ಷನ್, ಇಂದ್ರ ನಗರ ಒಳರಸ್ತೆಯಲ್ಲಿ ಭಾರಿ ಮಳೆಗೆ ಕೃತಕ ನೆರೆ ಉಂಟಾಗಿದ್ದು ವಾಹನ ಸವಾರರು, ಪಾದಚಾರಿಗಳು ನಡೆದಾಡಲು ಪರದಾಡಬೇಕಾಯಿತು.
Kshetra Samachara
04/09/2021 12:20 pm