ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಂಚಿಬೈಲು ಅರ್ಬಿಕಟ್ಟೆ ಫಾಲ್ಸ್; ಸುಂದರ ತಾಣದಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ

ಮೂಡುಬಿದಿರೆ: ಪ್ರಕೃತಿಯ ಅಪೂರ್ವ ಸೌಂದರ್ಯ, ವರ್ಷವಿಡೀ ನೀರಿನ ಹರಿವಿನಿಂದ ಕಂಗೊಳಿಸುತ್ತಿರುವ ಕಂಚಿಬೈಲು ಅರ್ಬಿಕಟ್ಟೆ ಫಾಲ್ಸ್ ಪ್ರವಾಸೋದ್ಯಮಕ್ಕೆ ಅವಕಾಶವಿದ್ದರೂ ಸೂಕ್ತ ರೀತಿಯಲ್ಲಿ ಅಭಿವೃದ್ಧಿಯಾಗದೆ, ಅಸುರಕ್ಷಿತ ತಾಣವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲು ಪರಿಸರದಲ್ಲಿರುವ ಅರ್ಬಿಕಟ್ಟೆ ಫಾಲ್ಸ್ ನೀರಿನ ಝರಿ, ಸುತ್ತಲೂ ಹಸಿರಿನಿಂದ ಕೂಡಿದ್ದು, ಅಪೂರ್ವ ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಪ್ರದೇಶ. ಆದರೆ ಅಲ್ಲಲ್ಲಿ ಅಪಾಯಕಾರಿ ಬಂಡೆಗಳಿರುವುದರಿಂದ ಸ್ವಲ್ಪ ಮೈಮರೆತರೂ ಅವಘಡಕ್ಕೆ ಕಾರಣವಾಗುತ್ತದೆ.

ನಿಸರ್ಗ ಸೌಂದರ್ಯಕ್ಕೆ ಮನಸೋತು ಇಲ್ಲಿಗೆ ಪಿಕ್‌ನಿಕ್, ಮೋಜಿಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಗೆ ಬರುವವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದರಿಂದ ಬೇರೆ ಬೇರೆ ಊರುಗಳಿಂದ ಕೂಡ ಜನರು ಬರುತ್ತಾರೆ. ಮೋಜು ಮಸ್ತಿಯ ನಡುವೆ ಇಲ್ಲಿ ಜಾರುವ ಬಂಡೆಯಲ್ಲಿ ನಿಂತು ಮೈಮರೆತು ಅಪಾಯ ಸಂಭವಿಸಿದ್ದೂ ಇದೆ. ನೀರಿನ ಹರಿವು ಇರುವ ಜಾಗಕ್ಕೆ ತಾಗಿಕೊಂಡು ಇರುವ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆಯುವವರು ಹೆಚ್ಚಾಗುತ್ತಿದ್ದು, ಕೆಲವರು ಕೂದಳೆಲೆಯ ಅಂತರದಲ್ಲಿ ಅಪಾಯದಿಂದ ಪಾರಾದ ಸಂದರ್ಭವೂ ಇದೆ. ಈ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಈ ಪ್ರದೇಶಕ್ಕೆ ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಬರುವ ಒಂದು ವರ್ಗವಾದರೆ, ರಜೆ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮತ್ತೊಂದೆಡೆ ಮದ್ಯಪಾನ ಮಾಡಲು ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪರಿಸರದ ಅಲ್ಲಲ್ಲಿ ಬಿದ್ದಿರುವ ಮದ್ಯದ ಖಾಲಿ ಬಾಟಲಿಗಳು, ಸಿಗರೇಟು ತುಂಡುಗಳು ಪರಿಸರ ಸ್ವಚ್ಛತೆಯನ್ನು ಹಾಳು ಮಾಡಿದೆ. ಬಂಡೆಗಳ ಮಧ್ಯೆ ಕೂಡ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲೂ ಇಲ್ಲಿ 50ಕ್ಕೂ ಅಧಿಕ ಮಂದಿ ಬಂದು ಹೋಗುತ್ತಿರುವುದು ಸಾಮಾನ್ಯವಾಗಿದೆ.

ಅಪಾಯಕಾರಿ ಪರಿಸರ ಕುರಿತು ನಿರ್ಬಂಧ ಅಥವಾ ಅಭಿವೃದ್ಧಿ ಪಡಿಸಿ ಜನರಿಗೆ ಅಪಾಯವಿಲ್ಲದ ರೀತಿಯಲ್ಲಿ ವ್ಯವಸ್ಥೆ ಮಾಡದಿರುವುದರಿಂದ ಕಂಚಿಬೈಲು ಅರ್ಬಿಕಟ್ಟೆ ಫಾಲ್ಸ್ ಅಸುರಕ್ಷಿತ, ಅವ್ಯವಸ್ಥೆಯ ತಾಣವಾಗಿದೆ.ಒಟ್ಟಿನಲ್ಲಿ ಈ ಫಾಲ್ಸ್ ಸದಾ ತನ್ನ ನೈಸರ್ಗಿಕ ಸೌದರ್ಯ ಉಳಿಸಿಕೊಳ್ಳಬೇಕು ಅಂದರೆ ಅದನ್ನು ಕಾಪಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

Edited By : Shivu K
Kshetra Samachara

Kshetra Samachara

03/09/2021 01:42 pm

Cinque Terre

11.44 K

Cinque Terre

0

ಸಂಬಂಧಿತ ಸುದ್ದಿ