ವರದಿ: ರಹೀಂ ಉಜಿರೆ,ಪಬ್ಲಿಕ್ ನೆಕ್ಸ್ಟ್
ಮಲ್ಪೆ: ಕಡಲ ಮಕ್ಕಳು ದೀರ್ಘ ರಜೆಯ ನಂತರ ತುತ್ತಿನಚೀಲ ಹಿಡಿದು ಮತ್ತೆ ಕಡಲಿಗೆ ಇಳಿದಿದ್ದಾರೆ. ಹೀಗಾಗಿ ಮಲ್ಪೆ ಬಂದರಿನಲ್ಲಿ ಮತ್ತೆ ಜೀವ ಕಳೆ ಬಂದಿದೆ. ಈ ಬಾರಿ ಉತ್ತಮ ಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ ಮೀನುಗಾರರು...
ವಾಯ್ಸ್: ಇಲ್ಲಿ ಕಾಣುತ್ತಿರುವುದು ಉಡುಪಿಯ ಮಲ್ಪೆಯ ಮೀನುಗಾರಿಕಾ ಬಂದರು. ಏಷ್ಯಾದ ಅತಿದೊಡ್ಡ ಸರ್ವಋತು ಬಂದರು ಎಂಬ ಹೆಗ್ಗಳಿಕೆ ಮಲ್ಪೆ ಬಂದರಿನದ್ದು.ವರ್ಷದ ಎಲ್ಲ ಕಾಲದಲ್ಲೂ ಈ ಬಂದರಿನಲ್ಲಿ ಮೀನುಗಾರಿಕೆ ಮಾಡಲಾಗುತ್ತದೆ. ಆದರೆ ಮಳೆಗಾಲದಲ್ಲಿ ಪರ್ಸಿನ್ ಮತ್ತು ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇದೆ. ಈ ಸಮಯದಲ್ಲಿ ನಡೆಯುವುದು ನಾಡದೋಣಿ ಮೀನುಗಾರಿಕೆ ಮಾತ್ರ.ಹೀಗಾಗಿ ಮಳೆಗಾಲದ ಎರಡು ತಿಂಗಳು ಆಳಸಮುದ್ರ ಮೀನುಗಾರರು ತಮ್ಮ ಬೋಟ್‌ಗಳನ್ನು ಮೇಲಕ್ಕೆತ್ತಿ,ದುರಸ್ಥಿ ಮಾಡಿ ಮತ್ತೆ ಅದನ್ನು ಸಮುದ್ರಕ್ಕಿಳಿಸುತ್ತಾರೆ. ಈ ಎಲ್ಲಾ ಕೆಲಸಗಳು ಮುಗಿದಿದ್ದು ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸಿ, ಮಂಜುಗಡ್ಡೆಗಳನ್ನು ತುಂಬಿಕೊಂಡು ಸಮುದ್ರಕ್ಕೆ ಇಳಿಯುತ್ತಿದ್ದಾರೆ.
ಜೂನ್ ತಿಂಗಳಾರಂಭದಲ್ಲಿ ಸ್ಥಗಿತಗೊಂಡಿದ್ದ ಡೀಪ್ ಸೀ ಫಿಶ್ಶಿಂಗ್ ಗೆ ಎರಡು ತಿಂಗಳ ರಜೆಯಿತ್ತು. ಈ ದಿನಗಳಲ್ಲಿ ಗಾಳಿಮಳೆ ಅಬ್ಬರ ಜಾಸ್ತಿ ಇರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯೋದಿಲ್ಲ. ಈಗ ಆಳಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಮುಗಿದಿದೆ. ಆಗಸ್ಟ್ ಮೊದಲ ವಾರದಿಂದಲೇ ಒಬ್ಬೊಬ್ಬರಾಗಿ ಸಮುದ್ರಕ್ಕೆ ತೆರಳುತ್ತಾರೆ. ಹೊಟ್ಟೆಪಾಡಿಗಾಗಿ ಅದನ್ನೇ ಉದ್ಯೋಗ ಮಾಡಿಕೊಂಡವರು ಕಡಲಿಗಿಳಿಯದೆ ಬೇರೆ ದಾರಿಯಿಲ್ಲ. ಕಳೆದೆರಡು ಸೀಸನ್ ನಲ್ಲಿ ಕೊರೋನಾ ಮತ್ತು ಲಾಕ್ ಡೌನ್ ಎಂದು ಸಾಕಷ್ಟು ನಷ್ಟ ಕಷ್ಟ ಅನುಭವಿಸಿದ್ದ ಮೀನುಗಾರರು ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದಾರೆ.
ಒಟ್ಟಿನಲ್ಲಿ ಕಡಲು ಮತ್ತು ಪ್ರಕೃತಿ ಒಲಿದರೆ ಇವರಿಗೆಲ್ಲ ಹೊಟ್ಟೆ ತುಂಬ ಊಟ. ಹೀಗಾಗಿ ಈ ಬಾರಿಯ ಮೀನುಗಾರಿಕಾ ಋತು ಚೆನ್ನಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿ ಕಡಲಿಗಿಳಿದ ಮೀನುಗಾರರಿಗೆ ನಾವು ಶುಭ ಹಾರೈಸೋಣ.
Kshetra Samachara
09/08/2021 06:19 pm