ಉಡುಪಿ: ಪ್ರಬಲಗೊಂಡ ಮುಂಗಾರು ಮಾರುತ; ಜಿಲ್ಲೆಯಾದ್ಯಂತ ಭರ್ಜರಿ ಮಳೆ
ಉಡುಪಿ: ಹವಾಮಾನ ಇಲಾಖೆಯ ವರದಿಯಂತೆ ಇಂದು ಜಿಲ್ಲೆಯಾದ್ಯಂತ ಮುಂಜಾನೆಯಿಂದಲೇ ಭರ್ಜರಿ ಮಳೆಯಾಗುತ್ತಿದೆ. ನಿನ್ನೆ ಕೂಡ ಉಡುಪಿ ಕಾರ್ಕಳ ಕುಂದಾಪುರ ಪಡುಬಿದ್ರಿ ಸಹಿತ ಹಲವೆಡೆ ಉತ್ತಮ ಮಳೆಯಾಗಿತ್ತು.
ಮುಂಗಾರು ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದ ಆಶಾಭಾವನೆ ಮೂಡಿದೆ. ಕಾರಣ, ಈ ವರ್ಷ ಜೂನ್ 20 ಕಳೆದರೂ ಮುಂಗಾರು ಪ್ರವೇಶಿಸಿರಲಿಲ್ಲ. ಇದೀಗ ನಿನ್ನೆಯಿಂದ ಸುರಿಯುತ್ತಿರುವ ಮಳೆ ಭತ್ತ ಕೃಷಿಕರ ಮೊಗದಲ್ಲೂ ಮಂದಹಾಸಕ್ಕೆ ಕಾರಣವಾಗಿದೆ.
ಹವಾಮಾನ ಇಲಾಖೆ ಇಂದಿನಿಂದ 5 ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆ ನೀಡಿತ್ತು. ಮುಂಜಾನೆಯಿಂದಲೇ ಬಹುತೇಕ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣದ ಜೊತೆಗೆ ಮಳೆಯಾಗುತ್ತಿದೆ. ಯಾಂತ್ರೀಕೃತ ಮೀನುಗಾರಿಕೆ ಈಗಾಗಲೇ ಸ್ಥಗಿತಗೊಂಡಿದ್ದು, ನಾಡದೋಣಿ ಮೀನುಗಾರಿಕೆಗೆ ಮಾತ್ರ ಈಗ ಅವಕಾಶವಿದೆ.
Kshetra Samachara
21/06/2022 02:30 pm