ಕುಂದಾಪುರ : ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಹೆಣ್ಣು ಚಿರತೆಯೊಂದು ಸೆರೆಯಾಗಿದೆ.ಇಲ್ಲಿನ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಪಕ್ಕದ ತೋಪಿನಲ್ಲಿ ಅರಣ್ಯ ಇಲಾಖೆಯು ಬೋನನ್ನಿರಿಸಿತ್ತು.
ಇಂದು ಬೆಳಿಗ್ಗೆ ಚಿರತೆ ಸೆರೆಹಿಡಯಲಾಗಿದ್ದು, ಹಿರಿಯ ಅರಣ್ಯಾಧಿಕಾರಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನ ಸಮೀಪ ತಿಂಗಳ ಹಿಂದೆ ಪ್ರತ್ಯಕ್ಷವಾದ ಚಿರತೆ ಸ್ಥಳೀಯ ಮನೆಯೊಂದರ ಸಾಕು ನಾಯಿಯನ್ನು ಹೊತ್ತೊಯ್ದಿತ್ತು.
ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು,ಬಳಿಕ ಇಲಾಖೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ತಿಂಗಳುಗಳಿಂದ ಚಿರತೆ ಪ್ರತ್ಯಕ್ಷವಾದ ತೋಪಿನಲ್ಲಿ ಬೋನು ಇಡಲಾಗಿದ್ದು, ಅಂದಾಜು 4-5 ವರ್ಷ ಪ್ರಾಯದ ಹೆಣ್ಣು ಚಿರತೆ ಸೆರೆಯಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.
Kshetra Samachara
02/10/2022 04:03 pm