ಮುಲ್ಕಿ: ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಕಲ್ಲಾಪು ತೋಕೂರು ರಸ್ತೆ ಬದಿ ಭಾರಿ ಗಾತ್ರದ ಹುಲ್ಲು ಬೆಳೆದಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ತೋಕೂರು ತಿಳಿಸಿದ್ದಾರೆ. ಪಡುಪಣಂಬೂರಿನಿಂದ ಕಲ್ಲಾಪು ತೋಕೂರು ರಸ್ತೆ ಜನನಿಬಿಡ ಪ್ರದೇಶವಾಗಿದ್ದು ರಸ್ತೆ ಬದಿ ಬೆಳೆದಿರುವ ಹುಲ್ಲಿನಿಂದ ನಡೆದಾಡಲು ಹೆದರಿಕೆಯಾಗುತ್ತಿದೆ. ಅಲ್ಲದೆ, ಎರಡು ವಾಹನಗಳು ಒಟ್ಟಿಗೆ ಬಂದರೆ ರಸ್ತೆ ಬದಿಗೆ ಸಂಚರಿಸಲು ಆತಂಕ ಎದುರಾಗಿದೆ. ಈ ಬಗ್ಗೆ ಅನೇಕ ಬಾರಿ ಪಂಚಾಯಿತಿಗೆ ದೂರು ನೀಡಿದರೂ ಇದುವರೆಗೂ ಹುಲ್ಲು ಕಟಾವು ನಡೆಸಿಲ್ಲ. ಬಳಿ ಬೆಳ್ಳಾಯರು ಹಿಂದೂ ರುದ್ರಭೂಮಿಗೆ ತೆರಳುವ ರಸ್ತೆ ಇದ್ದು ಸಂಚರಿಸಲು ಅನಾನುಕೂಲವಾಗಿದೆ. ತಿಂಗಳ ಹಿಂದೆ ಕಲ್ಲಾಪು ಬಳಿ ಸೇತುವೆ ಕುಸಿದಿದ್ದು ಅರ್ಧಂಬರ್ಧ ಕಾಮಗಾರಿ ನಡೆಸಿ ಇದುವರೆಗೂ ಸರಿಯಾದ ಕಾಮಗಾರಿ ಆರಂಭಿಸಿಲ್ಲ. ರಸ್ತೆಬದಿ ಹುಲ್ಲು ಕಟಾವು ಮಾಡದೆ ವಾಹನ ಸಂಚಾರಕ್ಕೆ ಹಾಗೂ ನಡೆದಾಡಲು ಕಷ್ಟವಾಗಿದೆ ಎಂದು ಧರ್ಮಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡುಪಣಂಬೂರು ಪಂಚಾಯತ್ ಆಡಳಿತ ನಿದ್ರಾವಸ್ಥೆಯಲ್ಲಿದ್ದು, ಕೇವಲ ಬಾಯಿಯಲ್ಲಿ ಮಾತ್ರ ತನ್ನ ಸಾಧನೆ ಕೊಚ್ಚಿಕೊಳ್ಳುತ್ತಿದ್ದು, ಕೆಲಸ ಶೂನ್ಯ ಎಂದು ವ್ಯಂಗ್ಯವಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಿ ನೂತನ ಕಲ್ಲಾಪು ಸೇತುವೆ ಕಾಮಗಾರಿ ನಡೆಸುವುದರ ಜೊತೆಗೆ ರಸ್ತೆಬದಿಯ ಅಪಾಯಕಾರಿ ಹುಲ್ಲು ಕಟಾವು ಮಾಡಲು ಪಂಚಾಯತಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
07/11/2020 08:49 pm