ಕಟಪಾಡಿ: ಉಡುಪಿ ಜಿಲ್ಲಾದ್ಯಂತ ಸತತವಾಗಿ ಸುರಿದ ಮಳೆಯಿಂದ ಮಹಾಪ್ರವಾಹ ಕಾಣಿಸಿಕೊಂಡಿತ್ತು. ಇದರಿಂದ ಹಲವು ಜನರು ತಮ್ಮ ಮನೆ,ಆಸ್ತಿ ಪಾಸ್ತಿ ಕಳಕೊಂಡರೆ ಹಲವೆಡೆ ಕೃಷಿ ಕೂಡ ಸಂಪೂರ್ಣ ನಾಶವಾಗಿದೆ.
ಉಡುಪಿ ಜಿಲ್ಲೆಯ ಕಟಪಾಡಿಯ ಮಟ್ಟುಗುಳ್ಳ ಸಂಪೂರ್ಣವಾಗಿ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಇನ್ನೇನು ತಿಂಗಳೊಳಗೆ ಕೈಸೇರಲಿದ್ದ ಮಟ್ಟುಗುಳ್ಳ ಬೆಳೆಗಳೆಲ್ಲ ಕೊಳೆತು ನಾರುತ್ತಿದೆ. ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಮಟ್ಟುಗುಳ್ಳ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಟಪಾಡಿ ಸಮೀಪದ ಮಟ್ಟು ಗ್ರಾಮದಲ್ಲಿ ಭತ್ತದ ಬೇಸಾಯ ಮಾಡದೇ ಗದ್ದೆಗಳನ್ನು ಹಡಿಲು ಬಿಟ್ಟು ಒಂದು-ಒಂದೂವರೆ ತಿಂಗಳ ಹಿಂದೆ ಮಟ್ಟುಗುಳ್ಳದ ಸಸಿಗಳನ್ನು ನಾಟಿ ಮಾಡಲಾಗಿತ್ತು.
ಮಟ್ಟು ಗ್ರಾಮದ 62 ರೈತರು 40 ಎಕರೆ ಪ್ರದೇಶದಲ್ಲಿ ಗುಳ್ಳದ ಗಿಡಗಳನ್ನು ಬೆಳೆಸಿದ್ದರು. ಗಿಡಗಳು ಹುಲುಸಾಗಿ ಬೆಳೆದು ಹೂವು ಬಿಡುವುದಕ್ಕೆ ತಯಾರಾಗಿದ್ದವು.ಆದರೆ ಗ್ರಾಮದಲ್ಲಿ ಹರಿಯುವ ಪಿನಾಕಿನಿ ಹೊಳೆಯ ಭೀಕರ ನೆರೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತು ಗಿಡಗಳೇ ಕೊಳೆತುಹೋಗಿವೆ.
15ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ಮಾಡಿಆಗಸ್ಟ್‌ನಲ್ಲಿ ಮಟ್ಟು ಗುಳ್ಳದ ಸಸಿಗಳನ್ನು ನಾಟಿ ಮಾಡಿದರೆ, ಅಕ್ಟೋಬರ್ ಎರಡನೇ ವಾರದಲ್ಲಿ ಕೊಯ್ಲಿಗೆ ಬರುತ್ತಿತ್ತು.
ಗುಳ್ಳದ ಗಿಡಗಳು ಹೂವು ಬಿಟ್ಟು, ಕಾಯಿ ಕಚ್ಚಿ, ಕೊಯ್ಲಿ ಬರಲು ಇನ್ನು 3-4 ವಾರಗಳಿರುವಾಗಲೇ ನೆರೆಗೆ ತುತ್ತಾಗಿವೆ. ಮಲ್ಚಿಂಗ್ ಮಾಡಿ ಸಸಿಗಳನ್ನು ನೆಡುವುದರಿಂದ ಎಕರೆಗೆ ಕನಿಷ್ಠ 40ಸಾವಿರ ರೂ.ವರೆಗೆ ವೆಚ್ಚ ಮಾಡಲಾಗಿದೆ. ಗ್ರಾಮದಲ್ಲಿ 15 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ಮಾಡಿ ಬೆಳೆಸಿದ ಮಟ್ಟುಗುಳ್ಳಬೆಳೆಯೀಗ ನೀರುಪಾಲಾಗಿದೆ.
ಗದ್ದೆಗಳಲ್ಲಿ ನೀರು ನಿಂತು ಬೆಳೆದಿರುವ ಗಿಡಗಳ ಬೇರುಗಳೆಲ್ಲ ಕೊಳೆತು ಹೋಗಿವೆ. ಇದರಿಂದ ಗಿಡಗಳು ಕೊಳೆತರೆ, ಇನ್ನು ಕೆಲವೆಡೆ ಬಾಡಿವೆ. ಇವುಗಳನ್ನೆಲ್ಲ ಕಿತ್ತು ತೆಗೆದು, ಹೊಸ ಸಸಿಗಳನ್ನು ನಾಟಿ ಮಾಡಬೇಕು.
ಆದರೆ ಎಲ್ಲ ರೈತರು ನಾಟಿ ಕೆಲಸ ಮುಗಿಸಿದ್ದರಿಂದ ಯಾರಲ್ಲಿಯೂ ಸಸಿಗಳು ತಯಾರಿಲ್ಲ. ಹೊಸ ಸಸಿಗಳ ತಯಾರಿಗೆ ಇನ್ನೂ ಒಂದು ತಿಂಗಳು ಹಿಡಿಯುತ್ತದೆ. ಅವುಗಳನ್ನು ನಾಟಿ ಮಾಡಿ ಬೆಳೆ ಬರಲು ಇನ್ನೆರಡು ತಿಂಗಳು ಕಾಯಬೇಕು.
ಆದ್ದರಿಂದ ಈ ಬಾರಿ ಮಾರುಕಟ್ಟೆಗೆ ಮಟ್ಟುಗುಳ್ಳ ಬರುವುದು ಮೂರು ತಿಂಗಳು ವಿಳಂಬವಾಗಲಿದೆ.
Kshetra Samachara
23/09/2020 08:16 pm