ಉಡುಪಿ: ಹೈಕೋರ್ಟ್ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ ಶಿರವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ತಡೆಯುವ ಹುನ್ನಾರವನ್ನು ವಿರೋಧಿಸಿ ಎಸ್ಸೆಸೆಫ್ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಇಂದು ರಾಜಕೀಯ ಪಕ್ಷಗಳು ಅಭಿವೃದ್ಧಿ ವಿಚಾರಗಳನ್ನು ಮಾತನಾಡುತ್ತಿಲ್ಲ. ಬಡತನ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮೌನ ವಹಿಸಲಾಗಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಅವಮಾನ ಮಾಡಿರುವ ಕೇಂದ್ರ ಸರಕಾರ, ಬಿಲ್ಲವರ ವಿರೋಧವನ್ನು ಬೇರೆ ಕಡೆ ಕೊಂಡೊಯ್ಯಲು ಹಿಜಾಬ್ ವಿಚಾರವನ್ನು ದೊಡ್ಡದು ಮಾಡಿದ್ದಾರೆ ಎಂದು ಎಸ್ಸೆಸ್ಸೆಫ್ ಮುಖಂಡರು ದೂರಿದರು.
ಹಿಜಾಬ್ ವಿಚಾರದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಗೇಟಿನಲ್ಲಿಯೇ ತಡೆಯುವ ಮೂಲಕ ಕಾಲೇಜು ಆಡಳಿತ ಮಂಡಳಿಗಳು ಮಾನವೀಯತೆ ಮರೆತಂತೆ ವರ್ತಿಸುತ್ತಿವೆ. ವಿದ್ಯಾರ್ಥಿಗಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ ಅವರ ಬೇಳೆ ಬೇಯಿಸಿಕೊಳ್ಳುವ ಕಾರ್ಯವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬ್ಬೀರ್ ಸಖಾಫಿ ಪಣಿಯೂರು, ರಾಜ್ಯ ಎಸ್ಸೆಸ್ಸೆಫ್ ಕ್ಯಾಂಪಸ್ ಸಿಂಡಿಕೇಟ್ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
25/02/2022 01:42 pm