ಕಾಪು : ಐಎಸ್‌ಪಿಆರ್‌ಎಲ್ ಎರಡನೇ ಹಂತದ ವಿಸ್ತರಣೆಗೆ ಭೂಮಿ ಕಳೆದುಕೊಳ್ಳುವ ಸಂತ್ರಸ್ಥರಿಗೆ ಉತ್ತಮ ರೀತಿಯಲ್ಲಿ ಪುನರ್ವಸತಿ ಕಾಲೊನಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಸಂತ್ರಸ್ತರಿಗೆ ಭೂ ಮೌಲ್ಯ ನೀಡಿಕೆ ಮತ್ತು ಭೂಮಿಗೆ ದರ ನಿಗದಿ ಪರೀಶಿಲನೆ ಬಗ್ಗೆ ಸರಕಾರದ ಜೊತೆಗೆ ಚರ್ಚಿಸಿ, ಬಳಿಕ ಜಿಲ್ಲಾದಿಕಾರಿ ನೇತೃತ್ವದ ಕಮಿಟಿಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಿಕೊಡಲಾಗುವುದು ಎಂದು ಉಡುಪಿ ಜಿಲ್ಲಾದಿಕಾರಿ ಜಿ. ಜಗದೀಶ್ ಹೇಳಿದರು.
ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಭವನದಲ್ಲಿ ಪಾದೂರು, ಕಳತ್ತೂರು ಗ್ರಾಮದಲ್ಲಿ ಐ.ಎಸ್.ಪಿ.ಆರ್.ಎಲ್ ನ ೨ನೇ ಹಂತದ ಯೋಜನೆಯ ಭೂಸ್ವಾದಿನತೆಯಿಂದ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಪುನರ್ ವಸತಿ ಸೌಲಭ್ಯ ಮತ್ತು ಪುನರ್ ನಿರ್ಮಾಣ ಒದಗಿಸುವ ಸಲುವಾಗಿ ಹಾಗೂ ಭೂಸ್ವಾದಿನ ವಿಚಾರದಲ್ಲಿ ಮಾಹಿತಿ ಮತ್ತು ಒದಗಿಸಲಾಗುವ ಸೌಲಭ್ಯಗಳ ಕುರಿತು ಸಂತ್ರಸ್ತರ ಸಭೆ ನಡೆಸಿ, ಅಹವಾಲು ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಭೆಯ ಬಗ್ಗೆ ಅವರು ಮಾಹಿತಿ ನೀಡಿದರು.
ಐಎಸ್‌ಪಿಆರ್‌ಎಲ್ ಯೋಜನೆಯ ಎರಡನೇ ಹಂತದ ವಿಸ್ತರಣೆಗಾಗಿ ಭೂಮಿ ಕಳೆದುಕೊಳ್ಳುವವರು ತಮಗೆ ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸುವಂತೆ ಮತ್ತು ಶಿರ್ವ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಇರುವಂತೆ ಭೂಮೌಲ್ಯವನ್ನೇ ಪರಿಹಾರವಾಗಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅದರಂತೆ ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಸಂತ್ರಸ್ತರ ಪರವಾಗಿ, ಅವರ ಬೇಡಿಕೆಯಂತೆಯೇ ಭೂಮಿಗೆ ಉತ್ತಮ ಮೌಲ್ಯವನ್ನು ನೀಡುವ ನಿಟ್ಟಿನಲ್ಲಿ ನಿರ್ಧರಿಸಲಾಗುವುದು ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮೆಂಡನ್ ಮಾತನಾಡಿ, ಪಾದೂರು ಐಎಸ್‌ಪಿಆರ್‌ಎಲ್ ಘಟಕದ ಎರಡನೇ ಹಂತದ ಕಾಮಗಾರಿಗೆ ಜಾಗ ಸರ್ವೆ ಹಂತದಲ್ಲಿದೆ. ಯೋಜನೆಯ ಸಂತ್ರಸ್ತರಿಗೆ ಪ್ರಸ್ತುತ ಇರುವ ಭೂ ಮೌಲ್ಯವನ್ನು ನೀಡಲು ಕಂಪೆನಿ ಮುಂದೆ ಬಂದಿದೆ. ಆದರೆ ಇದು ಕನಿಷ್ಟ ಭೂಮೌಲ್ಯವಾಗಿದ್ದು, ಇದೊಂದು ಲೋಕೋಪಯೋಗಿ ರಸ್ತೆಯ ಇಕ್ಕೆಲದಲ್ಲಿ ಬರುವ ಪ್ರದೇಶವಾಗಿದ್ದು ಉತ್ತಮ ದರ ನೀಡುವಂತೆ ಜಿಲ್ಲಾದಿಕಾರಿಗಳಿಗೆ ಅಹವಾಲು ಸಲ್ಲಿಸಲಾಗಿದೆ. ಈಗಿನ ದರಕ್ಕಿಂತ ಐದು ಪಟ್ಟು ಹೆಚ್ಚುವರಿ ದರ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ಪೈಯ್ಯಾರು ಶಿವರಾಮ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ,ಉಡುಪಿ ಜಿಲ್ಲಾ ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು, ಕಾಪು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತಿತರರು ಉಪಸ್ಥಿತರಿದ್ದರು
Kshetra Samachara
31/07/2021 09:54 pm