ಮಂಗಳೂರು: ನಗರದ ನಾಲ್ವರು ‘ಪ್ರತಿಷ್ಠಿತ’ ಉದ್ಯಮಿಗಳ ಮನೆ, ಕಚೇರಿ, ಆಸ್ಪತ್ರೆ ಹಾಗೂ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿನ್ನೆ(ಬುಧವಾರ) ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ನಡೆಸಿರುವ ದಾಳಿಯಲ್ಲಿ ಭರ್ಜರಿ ಬೇಟೆಯನ್ನೇ ಆಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ನಗದು ಮತ್ತು ಭಾರಿ ಪ್ರಮಾಣದ ಚಿನ್ನವೂ ದೊರಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರದ ಯೆನೆಪೋಯ ಸಮೂಹ ಸಂಸ್ಥೆಯ ಯೆನೆಪೋಯ ಅಬ್ದುಲ್ಲ ಕುಂಞಿ, ಶ್ರೀನಿವಾಸ ಗ್ರೂಪ್ ಆಫ್ ಎಜ್ಯುಕೇಶನಲ್ ಸಂಸ್ಥೆಯ ಶ್ರೀನಿವಾಸ ರಾವ್, ಎ.ಜೆ.ಗ್ರೂಪ್ ಮಾಲೀಕ ಎ.ಜೆ. ಶೆಟ್ಟಿ, ಕಣಚೂರು ಗ್ರೂಪ್ ಮಾಲೀಕ ಕಣಚೂರು ಮೋನು ಒಡೆತನದ 20ಕ್ಕೂ ಅಧಿಕ ಮನೆ, ಕಚೇರಿ, ಆಸ್ಪತ್ರೆಗಳು ಇನ್ನಿತರ ಸಂಸ್ಥೆಗಳ ಮೇಲೆ ಬೆಳಗ್ಗೆ 6 ಗಂಟೆ ಸುಮಾರಿಗೆ ಒಂದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಜೊತೆಗೆ ಯೆನೆಪೋಯ ಆಸ್ಪತ್ರೆ ಆಡಳಿತದೊಂದಿಗೆ ವಹಿವಾಟು ಹೊಂದಿರುವ ಅನುಮಾನದ ಮೇರೆಗೆ ಯೆನೆಪೋಯ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೇರಿದ ಮುಲ್ಕಿ ಗೇರುಕಟ್ಟೆಯಲ್ಲಿರುವ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ.
ದಾಳಿಯಲ್ಲಿ ಬೆಂಗಳೂರು ಐಟಿ ಇಲಾಖೆ ಸೇರಿದಂತೆ ವಿವಿಧ ರಾಜ್ಯಗಳ 250ಕ್ಕೂ ಅಧಿಕ ಐಟಿ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದಾರೆ. ದಾಳಿ ನಡೆಸಲು ಐಟಿ ಅಧಿಕಾರಿಗಳು ಸರ್ವ ಸಿದ್ಧತೆ ನಡೆಸಿದ್ದು, ಸೋಮವಾರ ಸಂಜೆಯೇ ಮಂಗಳೂರಿಗೆ ಬಂದಿಳಿದ್ದಾರೆ. ಬೆಳಗ್ಗೆಯಿಂದ ಸರಿ ಸುಮಾರು ರಾತ್ರಿಯವರೆಗೂ ದಾಖಲೆ ಪರಿಶೀಲನೆ, ತನಿಖೆ ನಡೆದಿದೆ. ದಾಳಿ ವೇಳೆ ನಾಲ್ವರೂ ಉದ್ಯಮಿಗಳು ಮನೆಯಲ್ಲೇ ಇದ್ದರು. ಯಾವೊಂದು ಮಾಹಿತಿಯೂ ಇಲ್ಲದೆ ಮನೆ ಪ್ರವೇಶ ಮಾಡಿರುವ ಅಧಿಕಾರಿಗಳನ್ನು ನೋಡಿ ಉದ್ಯಮಿಗಳು ಬೆಚ್ಚಿಬಿದ್ದಿದ್ದಾರೆ. ಬಳಿಕ ಸಾವರಿಸಿಕೊಂಡು ದಾಖಲೆ ಪರಿಶೀಲನೆ, ತನಿಖೆಗೆ ಸಹಕರಿಸಿದ್ದಾರೆ ಎನ್ನಲಾಗಿದೆ.
ಮಾಹಿತಿ ಸೋರಿಕೆಯಾಗುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಐಟಿ ಅಧಿಕಾರಿಗಳು ಪೊಲೀಸರ ಭದ್ರತೆ ಪಡೆಯುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಉದ್ಯಮಿಗಳು ಭಾರಿ ಪ್ರಭಾವಿಗಳಾಗಿದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಪಡೆಯಲಾಗಿದೆ. ಕೇವಲ ನಿಷ್ಠಾವಂತ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಈ ಕಾರ್ಯಾಚರಣೆಗೆ ಐಟಿ ಅಧಿಕಾರಿಗಳು ಫುಟ್ಬಾಲ್ ಚಾಂಪಿಯನ್ ಶಿಪ್ ನ ಪ್ರಹಸನವನ್ನೇ ರಚಿಸಿದ್ದರು. ಮಂಗಳವಾರ ಸಂಜೆಯೇ ಮಂಗಳೂರಿಗೆ ಬಂದಿಳಿದಿದ್ದ 250ಕ್ಕೂ ಅಧಿಕ ಐಟಿ ಅಧಿಕಾರಿಗಳು, ಕೇರಳದಲ್ಲಿ ಅಂತಾರಾಜ್ಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಹೋಗಲಿರುವುದಾಗಿ ಹೇಳಿ 60ರಷ್ಟು ಇನ್ನೋವಾ ಟ್ಯಾಕ್ಸಿಗಳನ್ನು ಏಜೆನ್ಸಿ ಮುಖಾಂತರ ಬುಕ್ ಮಾಡಿದ್ದರು. ಬೆಳಗ್ಗೆ ಆಟಗಾರರು ಬರಲಿದ್ದಾರೆ, ರೆಡಿಯಾಗಿರಿ ಎಂಬ ಸೂಚನೆಯನ್ನು ಡ್ರೈವರ್‌ಗಳಿಗೆ ನೀಡಲಾಗಿತ್ತು. ಅದರಂತೆ ಟ್ಯಾಕ್ಸಿಗಳು ಮುಂಜಾನೆ ಮೊದಲೇ ಸೂಚಿಸಿದ್ದ ಜಾಗಗಳಿಗೆ ಬಂದಿದ್ದವು. ಕಾರುಗಳಿಗೆ ಇಂಟರ್‌ಸ್ಟೇಟ್ ಫುಟ್ಬಾಲ್ ಚಾಂಪಿಯನ್‌ಶಿಪ್ ಸ್ಟಿಕ್ಕರ್‌ನ್ನೂ ಅಂಟಿಸಲಾಗಿತ್ತು.
ಕೊರೊನಾ ಸೋಂಕಿನ ಚಿಕಿತ್ಸೆ ಹೆಸರಿನಲ್ಲಿ ರೋಗಿಗಳಿಂದ ಕರಾವಳಿಯ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂ. ದೋಚಿದೆ ಎಂಬ ಆರೋಪ ಕೇಳಿ ಬಂದಿತ್ತು. ಸಾಮಾನ್ಯ ಚಿಕಿತ್ಸೆಗೂ ಆಸ್ಪತ್ರೆಗಳು ಪ್ರತಿ ರೋಗಿಗಳಿಂದ 15-16 ಲಕ್ಷ ರೂ. ಬಿಲ್ ಮಾಡಿತ್ತು ಎಂಬ ದಾಖಲೆಗಳು ವೈರಲ್ ಆಗಿದ್ದವು. ಹೀಗೆ ಸಾವಿರಾರು ರೋಗಿಗಳಿಂದ ಹಲವು ಕೋಟಿ ಆಸ್ತಿ ಮಾಡಿದ್ದಾರೆ. ಹಾಗಾಗಿಯೇ ಕೇವಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನೇ ಗುರಿಯಾಗಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.
Kshetra Samachara
18/02/2021 10:15 am