ಉಡುಪಿ: ಹೈಕೋರ್ಟ್ ನಿಂದ ಹಿಜಾಬ್ ಗೆ ಸಂಬಂಧಿಸಿ ತೀರ್ಪು ಬಂದಿದ್ದರೂ ನಮಗೆ ನ್ಯಾಯ ಸಿಗಲಿಲ್ಲ ಎಂದು ಉಡುಪಿಯಲ್ಲಿ ಮುಸ್ಲಿಂ ಧರ್ಮಗರುಗಳು ಹೇಳಿದ್ದಾರೆ. ಹೈಕೋರ್ಟ್ ಉಚ್ಚ ನ್ಯಾಯಾಲಯದ ಹಿಜಾಬ್ ಕುರಿತಾದ ತೀರ್ಪಿನ ಹಿನ್ನೆಲೆಯಲ್ಲಿ ಇಂದು ಮುಸ್ಲಿಂ ವೆಲ್ ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಧಾರ್ಮಿಕ ವಿದ್ವಾಂಸರ ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.
ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹಿಜಾಬ್ ಇಸ್ಲಾಮಿನ ಮೂಲಭೂತ ಭಾಗವಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿರುವುದು ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿದೆ. ನಾವು ತರಗತಿಯಲ್ಲಿ ಹಿಜಾಬ್ ಗೆ ಅವಕಾಶ ಕೇಳಿದ್ದೆವು.ಆದರೆ ಕೋರ್ಟ್ ,ಹಿಜಾಬ್ ಅಗತ್ಯ ಧಾರ್ಮಿಕ ಅಂಗ ಅಲ್ಲ ಎಂದು ತೀರ್ಪು ಕೊಟ್ಟಿದೆ. ಈ ತೀರ್ಪು ಮೂಲಭೂತ ಹಕ್ಕು ಮತ್ತು ಸಂವಿಧಾನದ ಮೌಲ್ಯಕ್ಕೆ ತಕ್ಕದಲ್ಲ.. ಯಾವುದು ಧರ್ಮದ ಭಾಗ, ಯಾವುದು ಅಲ್ಲ ಎಂದು ನ್ಯಾಯಾಲಯ ತೀರ್ಮಾನಿಸಲು ಹೋಗಿರುವುದು ಆಘಾತಕಾರಿಯಾಗಿದೆ. ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗ ಎಂಬುದರಲ್ಲಿ ಎಲ್ಲರೂ ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದರು. ಈ ತೀರ್ಪು ಅಂತಿಮವಲ್ಲ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಧಾರ್ಮಿಕ ಮತ್ತು ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಹಲವು ಧಾರ್ಮಿಕ ವಿದ್ವಾಂಸರು ಉಪಸ್ಥಿತರಿದ್ದರು.
Kshetra Samachara
16/03/2022 05:52 pm