ಬೈಂದೂರು: ನೂರಾರು ದೈವ- ದೇವರುಗಳಿಗೆ ಮೂರ್ತರೂಪ ನೀಡಿದ ಹಿರಿಯ ಶಿಲ್ಪಿ ಉಪ್ಪುಂದದ ರತ್ನಾಕರ ಎಸ್.ಗುಡಿಗಾರ್ 2021ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉಪ್ಪುಂದ ನ್ಯೂ ಜನತಾ ಕಾಲೋನಿ ನಿವಾಸಿ ರತ್ನಾಕರ ಗುಡಿಗಾರ್ ಕಳೆದ 60 ವರ್ಷಗಳಿಂದ ವಂಶಪಾರಂಪರ್ಯವಾಗಿ ಮರದಿಂದ ದೈವ- ದೇವರ ಮೂರ್ತಿ ಕೆತ್ತನೆ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ. 84ರ ಹರೆಯದಲ್ಲೂ ಸೇವಾ ಕಾರ್ಯ ಮುಂದುವರಿಸಿರುವ ಗುಡಿಗಾರರು, ವರ್ಷಕ್ಕೆ 150ಕ್ಕೂ ಹೆಚ್ಚು ಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ.
ದೆಹಲಿ, ಭೋಪಾಲ್, ಚೆನ್ನೈ ಹಾಗೂ ರಾಜ್ಯದ ವಿವಿಧೆಡೆ ಇವರ ಕೆತ್ತನೆಯ ಮೂರ್ತಿಗಳು ಪೂಜಿಸಲ್ಪಡುತ್ತಿದೆ. ಉಡುಪಿ ಜಿಲ್ಲೆಯ ನೂರಾರು ದೈವಸ್ಥಾನಗಳ ಮೂರ್ತಿಗಳನ್ನು ಕೆತ್ತನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಒಂದು ಅಡಿಯಿಂದ 28 ಅಡಿಯ ತನಕದ ಮೂರ್ತಿಗಳನ್ನು ಅವರು ಕೆತ್ತನೆ ಮಾಡಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಖುಷಿಯನ್ನು ಅವರ ಹಿರಿಮಗ ಸುಕುಮಾರ್ ಗುಡಿಗಾರ್ ಹೇಳಿದ್ದು ಹೀಗೆ...
ರತ್ನಾಕರ್ ಗುಡಿಗಾರ್ ರಿಂದ ತರಬೇತಿ ಪಡೆದ ಮಕ್ಕಳು ಈಗ ಈ ವೃತ್ತಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಕಿರಿಮಗ ಕೃಷ್ಣ ಗುಡಿಗಾರ್ ಹೀಗೆ ಹೇಳುತ್ತಾರೆ...
ರತ್ನಾಕರ ಗುಡಿಗಾರ ಅವರ ಸೇವೆ ಗುರುತಿಸಿ ಸಾಂಪ್ರದಾಯಿಕ ಶಿಲ್ಪ ವಿಭಾಗದಲ್ಲಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ 50,000 ನಗದು, ಸ್ಮರಣಿಕೆ ಒಳಗೊಂಡಿದೆ. ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೆ. 8ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
- ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್
Kshetra Samachara
01/09/2022 05:59 pm