ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ ಬಳಿ ಬಾಕಿಯಿರುವ ಚತುಷ್ಪಥ ಕಾಂಕ್ರೀಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಭಾರಿ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.
ಇಂದ್ರಾಳಿ ರೈಲ್ವೆ ಸೇತುವೆ ಬಳಿ ಬಾಕಿ ಇರುವ ಕಾಂಕ್ರೀಟೀಕರಣ ಕಾಮಗಾರಿಯನ್ನು ಅ.1 ರಿಂದ ಆರಂಭಿಸಲು ಉದ್ದೇಶಿಸಿರುವುದರಿಂದ 45 ದಿನ ದ್ವಿಚಕ್ರ ವಾಹನ, ಕಾರು ಮತ್ತು ಬಸ್ ಹೊರತುಪಡಿಸಿ ಭಾರಿ ವಾಹನ ಸಂಚಾರವನ್ನು ಅ.1 ರಿಂದ ನ.14 ರವರೆಗೆ ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ. ಕುಂದಾಪುರ ಕಡೆಯಿಂದ ಬರುವ ಘನ ವಾಹನಗಳು ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆಯ ಮೂಲಕ ಮಣಿಪಾಲಕ್ಕೆ ತಲುಪುವುದು. ಉಡುಪಿಯಿಂದ ಬರುವ ಘನ ವಾಹನಗಳು ಕಲ್ಲಂಕ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುಂಡಿಬೈಲು ರಸ್ತೆ ಮೂಲಕ ಎ.ವಿ. ಬಾಳಿಗ ಆಸ್ಪತ್ರೆ ಬಳಿಯಿಂದ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲಕ್ಕೆ ಚಲಿಸುವುದು. ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆಯ ಮೂಲಕ ಚಲಿಸುವುದು. ಉಡುಪಿಯಿಂದ ಮಣಿಪಾಲಕ್ಕೆ ಚಲಿಸುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸಲು ಸೂಚನೆ ನೀಡಲಾಗಿದೆ.
Kshetra Samachara
29/09/2022 04:50 pm