ವಿಶೇಷ ವರದಿ: ರಹೀಂ ಉಜಿರೆ
ಕಾರ್ಕಳ: ಪ್ರಭಾವಿ ಸಚಿವ ಸುನಿಲ್ ಕುಮಾರ್ ಕ್ಷೇತ್ರದಲ್ಲಿ ರಸ್ತೆಗಳು ಚೆನ್ನಾಗಿವೆ ಎಂಬ ಅಭಿಪ್ರಾಯ ಎಲ್ಲೆಡೆ ಇತ್ತು. ಆದರೆ, ಕಾರ್ಕಳ ತಾಲೂಕಿನ ಮುಡಾರು ಗ್ರಾಮ ವ್ಯಾಪ್ತಿಯ ಮುಡ್ರಾಲು ಕ್ರಾಸ್ ಮಂಜಲ್ಪಾದೆಯಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಒಂದೇ ವರ್ಷದೊಳಗೆ ತನ್ನ "ಬಂಡವಾಳ" ಬಯಲುಗೊಳಿಸಿದೆ!
ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ವರ್ಷವಾಗುವುದರೊಳಗೆ ಕಳಪೆ ಕಾಮಗಾರಿ ವಾಸನೆ ಬಡಿಯ ತೊಡಗಿದ್ದು, ಜನರು ಇದೆಷ್ಟು ಪರ್ಸಂಟೇಜ್ ರಸ್ತೆ ಎಂದು ಆಡಿಕೊಳ್ಳತೊಡಗಿದ್ದಾರೆ.
ಈ ರಸ್ತೆಯಾಗಿ ವರ್ಷವೂ ಕಳೆದಿಲ್ಲ. ಆದರೆ, ಕಾಂಕ್ರೀಟ್ ರಸ್ತೆಯ ಜಲ್ಲಿಕಲ್ಲು ಕಿತ್ತುಬಂದಿದ್ದು, ಹೊಂಡ ಬೀಳತೊಡಗಿದೆ. ಇದು ಗ್ರಾಮೀಣ ಪ್ರದೇಶವಾಗಿದ್ದು, ಹೆಚ್ಚಿನ ವಾಹನ ಸಂಚಾರವೂ ಇಲ್ಲಿಲ್ಲ. ಆದರೂ ಒಂದೇ ವರ್ಷದಲ್ಲಿ ಕಚ್ಚಾ ರಸ್ತೆಯಂತಾಗಿದ್ದು ಕಳಪೆ ಕಾಮಗಾರಿಯಲ್ಲದೆ ಬೇರೆ ಯಾವ ಕಾರಣವೂ ಇಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಲ್ಲಿ ಮೇಲೆ ಸಂಚರಿಸುವಾಗ ಸ್ಕಿಡ್ ಆಗಿ ಬೀಳುವ ಅಪಾಯವಿದೆ.
ಮುಡಾಲು ಕ್ರಾಸ್-ಮಂಜಲ್ಪಾದೆ ಅಂಗನವಾಡಿ ಕೇಂದ್ರದವರೆಗಿನ ರಸ್ತೆಯನ್ನು ಜಲಸಂಪನ್ಮೂಲ ಇಲಾಖೆಯು ವಾರಾಹಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿತ್ತು. ಸುಮಾರು 75 ಲಕ್ಷ ರೂ.ಇದಕ್ಕಾಗಿ ವ್ಯಯಿಸಲಾಗಿದೆ. 780 ಮೀಟರ್ ಉದ್ದ ಹಾಗೂ 3.7 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ಇದು. ಕಾಂಕ್ರೀಟ್ ಮಿಶ್ರಣ ಮಾಡಲಾಗಿದ್ದ ಜಲ್ಲಿಕಲ್ಲು ರಸ್ತೆಯ ಹಲವು ಕಡೆ ಕಿತ್ತುಹೋಗಿ, ರಸ್ತೆಯಲ್ಲಿ ಚದುರಿಕೊಂಡಿದೆ. ಕಾಮಗಾರಿಯ ಗುಣಮಟ್ಟ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ನಿರ್ಮಿಸಿದ ಮುಡಾಲು ಕ್ರಾಸ್ ಕಾಂಕ್ರೀಟ್ ರಸ್ತೆಯು ಮುಂದೆ ದುರ್ಗ, ಕೆರ್ವಾಶೆ ಸಂಪರ್ಕಿಸುವ ಗ್ರಾಮೀಣ ರಸ್ತೆಯೂ ಹೌದು. ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದ್ದರೆ, ಮುಡಾರು ಗ್ರಾಮದ ಸುಮಾರು 150 ಮನೆಗಳ ಮಂದಿಗೆ ಅನುಕೂಲ ಆಗುವ ರಸ್ತೆಯಾಗಲಿತ್ತು. ಇದೀಗ ಕಾಂಕ್ರೀಟ್ ಕಿತ್ತು ಬರಲಾರಂಭಿಸಿರುವುದರಿಂದ ಗುತ್ತಿಗೆದಾರರು ಮತ್ತು ಸಚಿವರ ವಿರುದ್ಧ ಜನ ಅಸಮಾಧಾನಗೊಂಡಿದ್ದಾರೆ.
PublicNext
14/08/2022 08:54 am