ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ನಿಂದ ತಲಪಾಡಿವರೆಗೆ ದಿನದಿಂದ ದಿನಕ್ಕೆ ಹೊಂಡ ಗುಂಡಿಗಳು ಹೆಚ್ಚಾಗುತ್ತಿದ್ದು, ಗಾತ್ರವೂ ದೊಡ್ಡದಾಗಿ ದ್ವಿಚಕ್ರ, ಲಘು ವಾಹನ ಸವಾರರಿಗೆ ದುಸ್ತರವಾಗಿ ಪರಿಣಮಿಸುತ್ತಿದೆ.
ಮಳೆಗಾಲಕ್ಕೆ ಮುನ್ನ ಹೆದ್ದಾರಿ ನಿರ್ವಹಣೆಗೆ ತೇಪೆ ಹಾಕುವ ಕಾರ್ಯ ನಡೆದಿತ್ತು. ಕಳೆದೆರಡು ವಾರಗಳಿಂದ ಬಿರುಸಾಗಿ ಸುರಿಯುತ್ತಿರುವ ಮಳೆ ಹಾಗೂ ಭಾರೀ ಘನ ವಾಹನಗಳ ಸಂಚಾರದಿಂದ ಡಾಂಬರು ಕಿತ್ತು ದೊಡ್ಡ ಹೊಂಡಗಳು ನಿರ್ಮಾಣವಾಗಿದೆ. ಇದೀಗ ಸುರತ್ಕಲ್, ಬೈಕಂಪಾಡಿ, ಕುಳಾಯಿ, ಎಂಸಿಎಫ್ ಮುಂಭಾಗ, ಕೂಳೂರು ಸೇತುವೆ, ಬಂಗ್ರ ಕೂಳೂರು, ಎಜೆ ಆಸ್ಪತ್ರೆ ಮುಂಭಾಗ, ಕೆಪಿಟಿ ಜಂಕ್ಷನ್, ನಂತೂರು ಜಂಕ್ಷನ್ ಮುಂದಕ್ಕೆ ತೊಕ್ಕೊಟ್ಟು, ತಲಪಾಡಿವರೆಗೆ ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು ಬಿದ್ದು ಹಾಳಾಗಿವೆ. ಪರಿಣಾಮ ಸಂಚಾರ ದುಸ್ತರವಾಗಿದೆ.
ಮಳೆಯ ವೇಳೆ ಹೊಂಡ ಗುಂಡಿಗಳಲ್ಲಿ ನೀರು ನಿಂತು ಹೊಂಡಗಳಿರುವುದೇ ಅರಿವಾಗುತ್ತಿಲ್ಲ. ಅಲ್ಲದೆ ಅಲ್ಲಲ್ಲಿ ಹಠಾತ್ ಎದುರಾಗುವ ಗುಂಡಿಗಳಿಗೆ ದ್ವಿಚಕ್ರ ವಾಹನಗಳ ಚಕ್ರವು ಬಿದ್ದು ಸವಾರರು ರಸ್ತೆಗೆ ಬೀಳುವ ಸಾಧ್ಯತೆಯಿದೆ. ಪರಿಣಾಮ ದ್ವಿಚಕ್ರ ಸವಾರರು ಬಿದ್ದು ಗಾಯಗೊಳ್ಳಬಹುದು. ಅಲ್ಲದೆ ಇದು ಅವರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಭಾರೀ ವಾಹನಗಳಿಗೆ ಹೊಂಡ ಗುಂಡಿಗಳು ಸಮಸ್ಯೆಗಳಾಗದಿದ್ದರೂ ದ್ವಿಚಕ್ರ ವಾಹನ ಸವಾರರು ಎಚ್ಚರದಿಂದ ಸವಾರಿ ಮಾಡಬೇಕಾಗಿದೆ. ಮಳೆಗಾಲದಲ್ಲಿ ರಸ್ತೆ ದುರಸ್ತಿ ಸಾಧ್ಯವಾಗದಿದ್ದರೂ, ಮಳೆ ಕಡಿಮೆಯಾದ ತಕ್ಷಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಮಾಡಬೇಕಾದ ಅವಶ್ಯಕತೆಯಿದೆ.
-ವಿಶ್ವನಾಥ ಪಂಜಿಮೊಗರು ಪಬ್ಲಿಕ್ ನೆಕ್ಸ್ಟ್ ಮಂಗಳೂರು
Kshetra Samachara
14/07/2022 08:33 am