ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಮಳೆ ನಿಲ್ಲುತ್ತಿಲ್ಲ. ಧಾರಾಕಾರ ಮಳೆಗೆ ಅಂದಾಜು 10 ಕಿ.ಮೀ ನಷ್ಟು ರಸ್ತೆ ಹಾಳಾಗಿದ್ದಾಗಿ ಜಿಲ್ಲಾಡಳಿತ ಅಂದಾಜಿಸಿದೆ.ಆದರೆ ನಾವೀಗ ಉಡುಪಿ ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯ ಚಿತ್ರಣವನ್ನು ನಿಮ್ಮ ಮುಂದಿಡುತ್ತಿದ್ದೇವೆ....
ಇದು ಉಡುಪಿ ಮಣಿಪಾಲವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ದೃಶ್ಯ. ತಕ್ಷಣ ನೋಡುವಾಗ ಯಾವುದೋ ಹಳ್ಳಿಯ ರಸ್ತೆಗಿಂತ ಇದು ಭಿನ್ನ ಅನ್ನಿಸುವುದಿಲ್ಲ.ಈ ರಸ್ತೆ ನಿರ್ಮಾಣಗೊಂಡು ಹೆಚ್ಚು ವರ್ಷಗಳಾಗಿಲ್ಲ.ಆದರೆ ಬಹುತೇಕ ಕಡೆ ಕೆಸರು ಹೊಂಡಗಳಿಂದ ತುಂಬಿಹೋಗಿದೆ.ಮುಖ್ಯವಾಗಿ ಇಂದ್ರಾಳಿ ರೈಲ್ವೆ ಸೇತುವೆ ಸಮೀಪ ವಾಹನ ಸವಾರರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಇಷ್ಟಾದರೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ.ಈ ಇಂದ್ರಾಳಿಯಲ್ಲಿ ರಸ್ತೆ ಇಷ್ಟೊಂದು ಹದಗೆಡಲು ಮುಖ್ಯ ಕಾರಣ ,ಇಲ್ಲಿರುವ ರೈಲ್ವೆ ಬ್ರಿಡ್ಜ್. ರೈಲ್ವೆ ಬ್ರಿಡ್ಜ್ ಕಾಮಗಾರಿ ಪ್ರಾರಂಭಿಸಿ ನಾಲ್ಕು ವರ್ಷ ಕಳೆದಿವೆ.ಆದರೆ ಕಾಮಗಾರಿ ತಾಂತ್ರಿಕ ಕಾರಣಗಳಿಂದ ಯಾವತ್ತೋ ನಿಂತು ಹೋಗಿದೆ.ಹೀಗಾಗಿ ಇಲ್ಲಿ ರಸ್ತೆ ಹೊಂಡ ರಿಪೇರಿ ಮಾಡಿದರೂ ಕೆಲವೇ ತಿಂಗಳಲ್ಲಿ ಕಿತ್ತು ಹೋಗುತ್ತದೆ.ಇತ್ತೀಚೆಗೆ ಸಿಎಂ ಬಂದಾಗ ತೇಪೆಹಾಕಲಾಗಿತ್ತು.ಅದು ಎರಡೇ ವಾರದಲ್ಲಿ ಮಳೆಗೆ ಕೊಚ್ಚಿ ಹೋಗಿದೆ.
ಇದರ ಪಕ್ಕವೇ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಶಾಲೆ ಇದ್ದು ಶಾಲೆ ಆರಂಭದ ಸಮಯ ಮತ್ತು ಬಿಡುವ ವೇಳೆಗೆ ಇಲ್ಲಿಯ ಪರಿಸ್ಥಿತಿ ಕೇಳೋದೇ ಬೇಡ. ಮಳೆ ಬಂದಾಗ ಇದು ಅಕ್ಷರಶಃ ನರಕವಾಗಿ ಪರಿಣಮಿಸುತ್ತದೆ.
ರೈಲ್ವೆ ಸೇತುವೆ ನಿರ್ಮಾಣಕ್ಕೆ ಹಲವು ನಿಯಮಾವಳಿಗಳಿವೆ ನಿಜ.ಆದರೆ ರೈಲ್ವೆ ಸೇತುವೆಗಾಗಿ ಇನ್ನೆಷ್ಟು ವರ್ಷ ಈ ಹೊಂಡ ತುಂಬಿದ ರಸ್ತೆಯಲ್ಲಿ ಜನ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು? ತಕ್ಷಣ ಇಲ್ಲಿ ಸೇತುವೆ ನಿರ್ಮಾಣ ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಸುಗಮ ಮಾಡಿ ಕೊಡಬೇಕಿದೆ.
Kshetra Samachara
12/07/2022 09:02 am