ಸುಳ್ಯ: ಸುಳ್ಯ ರೋಟರಿ ಕ್ಲಬ್ ನೇತೃತ್ವದಲ್ಲಿ ನವೀಕರಣ ಮಾಡಿದ ಸುಳ್ಯ ಜಯನಗರದ ರುದ್ರಭೂಮಿಯನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್ ಅವರು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗು ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್ ಅವರಿಗೆ ರುದ್ರಭೂಮಿಯನ್ನು ಹಸ್ತಾಂತರ ಮಾಡಿದರು.
ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ, ನ.ಪಂ.ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಶಿಲ್ಪಾ ಸುದೇವ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅತಿಥಿಗಳಾಗಿದ್ದರು. ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಸ್ತೂರಿ ಶಂಕರ್, ರೋಟರಿ ಕ್ಲಬ್ ಕಾರ್ಯದರ್ಶಿ ಆನಂದ ಖಂಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
15 ಲಕ್ಷದಲ್ಲಿ ಅಭಿವೃದ್ಧಿ:
15 ಲಕ್ಷ ರೂ ವೆಚ್ಚದಲ್ಲಿ ರುದ್ರಭೂಮಿಯನ್ನು ಅಭಿವೃದ್ಧಿ ಮಾಡಲಾಗಿದೆ. ಮೃತದೇಹದ ದಹನಕ್ಕೆ ಬೇಕಾದ ಸಿಲಿಕಾನ್ ಚೇಂಬರ್ ಅಳವಡಿಸಲಾಗಿದೆ. ಸುಸಜ್ಜಿತವಾದ ಕಟ್ಟಡದ ಮೇಲ್ಚಾವಣಿ ಮಾಡಲಾಗಿದೆ.
ಸಮೀಪದಲ್ಲಿ ಶೌಚಾಲಯ ಮತ್ತು ಸ್ನಾನದ ಕೋಣೆಯನ್ನು ಒಳಗೊಂಡಿರುವ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ರುದ್ರಭೂಮಿಯ ಮುಂಭಾಗದಲ್ಲಿ ಸುಂದರ ಧ್ಯಾನಸ್ಥ ಶಿವನ ಮೂರ್ತಿಯನ್ನು ಸ್ಥಾಪಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಿಲಿಕಾನ್ ಚೇಂಬರ್ ಕೊಡುಗೆಯಾಗಿ ನೀಡಿದ್ದಾರೆ. ರೋಟರಿ ಸದಸ್ಯರು ಸಾರ್ವಜನಿಕರು ರುದ್ರಭೂಮಿಯ ಅಭಿವೃದ್ಧಿಗೆ ಧನ ಸಹಾಯ ನೀಡಿದ್ದಾರೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್ ಹೇಳಿದರು.
Kshetra Samachara
23/06/2022 08:11 am