ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕಕ್ವ ಮೈಲೊಟ್ಟು ಮೂಲಕ ಮುಲ್ಕಿ ಸಂಪರ್ಕರಸ್ತೆ ತೀವ್ರ ಹದಗೆಟ್ಟಿದ್ದು ಸಂಚಾರ ತ್ರಾಸದಾಯಕವಾಗಿದೆ.
ಅತಿಕಾರಿ ಬೆಟ್ಟು ಗ್ರಾ. ಪಂ.ನ ಗ್ರಾಮೀಣ ಭಾಗವಾದ ಕಕ್ವ ಪ್ರದೇಶದಿಂದ ಅನೇಕ ಮಂದಿ ತಮ್ಮ ಮೂಲಭೂತ ಸೌಕರ್ಯಗಳಿಗೆ ಗ್ರಾ .ಪಂ
ಹಾಗೂ ತಮ್ಮ ದೈನಂದಿನ ಕೆಲಸಗಳಿಗೆ ಮುಲ್ಕಿ ಪಟ್ಟಣ ವನ್ನು ಅವಲಂಬಿಸಿದ್ದು ರಸ್ತೆ ತೀರಾ ಹದಗೆಟ್ಟಿರುವುದರಿಂದ ಏರುತ್ತಿರುವ ತೈಲಬೆಲೆಯಲ್ಲಿ ಸಂಚಾರ ತ್ರಾಸದಾಯಕ ವಾಗಿ ಪರಿಣಮಿಸಿದೆ.
ಕಳೆದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಎಗ್ಗಿಲ್ಲದೆ ಮರಳು ಲಾರಿಗಳು ಸಂಚರಿಸಿದ್ದು ರಸ್ತೆ ತೀವ್ರ ಹದಗೆಡಲು ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪ
ಈ ರಸ್ತೆಯ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಕಛೇರಿ ಬಳಿ ಕೊಂಕಣ ರೈಲ್ವೆ ಹಾದುಹೋಗುತ್ತಿದ್ದು ರೈಲ್ವೆ ಗೇಟ್ ಬಳಿ ರಸ್ತೆ ಹೊಂಡಾ ಗುಂಡಿಯಾಗಿ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಆಟೋಚಾಲಕ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಂಕಣ ರೈಲ್ವೆ ಪ್ರಾರಂಭವಾದಾಗಿನಿಂದ ಡಾಮರು ಕಾಣದ ರೈಲ್ವೆ ಗೇಟ್ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಕಕ್ವ ಮುಲ್ಕಿ ಸಂಪರ್ಕರಸ್ತೆ ಜೊತೆಗೆ ಕೂಡಲೇ ರೈಲ್ವೆ ಗೇಟ್ ಬಳಿ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ರಸ್ತೆ ದುರಸ್ತಿ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Kshetra Samachara
02/02/2022 10:16 am