ಮುಲ್ಕಿ:ಮಂಗಳೂರು,ಹಳೆಯಂಗಡಿ ಹಾಗೂ ಪಕ್ಷಿಕೆರೆ ಕಿನ್ನಿಗೋಳಿ ಕಟೀಲು ನಡುವಿನ ಪ್ರಧಾನ ಸಂಪರ್ಕ ರಸ್ತೆಯ ಇಂದಿರಾನಗರದ ರೈಲ್ವೇ ಕ್ರಾಸಿಂಗನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಅಮಿಟೆಡ್ ಸಂಸ್ಥೆಯು ಕಾಮಗಾರಿಯ ಪ್ರಯುಕ್ತ ಜ. 21 ಹಾಗೂ 22 ರಂದು ಎರಡು ದಿನ ಬಂದ್ ಮಾಡಿದ್ದು ಮಾಹಿತಿ ಕೊರತೆಯಿಂದ ಶುಕ್ರವಾರ ಬೆಳಿಗ್ಗೆಯಿಂದ ವಾಹನ ಸವಾರರು ಪರದಾಡಬೇಕಾಯಿತು.
ಹಳೆಯಂಗಡಿ ಇಂದಿರಾ ನಗರದಲ್ಲಿ ರೈಲ್ವೇ ಹಳಿ ಹಾಗೂ ಹಳಿಯ ಕೆಳಗೆ ಅಳವಡಿಸುವ ಸಿಮೆಂಟ್‌ನ ಪಟ್ಟಿಯನ್ನು ಹೊಸದಾಗಿ ಅಳವಡಿಸುವ ಕಾಮಗಾರಿಯು ನಡೆಯಲಿರುವುದರಿಂದ ಹಳೆಯಂಗಡಿ ಕಿನ್ನಿಗೋಳಿ-ಕಟೀಲು ಪ್ರಧಾನ ಸಂಪರ್ಕ ರಸ್ತೆಯನ್ನು ಬಂದ್ ಮಾಡಿ ಕಾಮಗಾರಿ ವೇಗದಿಂದ ನಡೆಯುತ್ತಿದೆ.
ಈ ನಡುವೆ ಮಾಹಿತಿ ಕೊರತೆಯಿಂದ ಅನೇಕ ವಾಹನ ಸವಾರರು ಸುತ್ತುಬಳಸಿ ಸಂಚಾರ ನಡೆಸಿದ್ದು, ಕೆಲವರು ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಸುರಕ್ಷತೆಗೆ ಕರ್ತವ್ಯನಿರತರಾಗಿದ್ದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಸಿದರು.
ಕೆಲ ಪ್ರಯಾಣಿಕರು ಹಾಗೂ ಸವಾರರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಮಾಹಿತಿ ಕೊರತೆಯಿಂದಾಗಿ ನಾವು ಈ ರಸ್ತೆಯಲ್ಲಿ ಬಂದಿದ್ದೇವೆ ರಸ್ತೆ ಬಂದ್ ಮಾಡುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲ ವರ್ಷಗಳಿಂದ ನಿಮಿಷಕ್ಕೊಂದರಂತೆ ವಾಹನ ಸಂಚರಿಸುವ ಹಳೆಯಂಗಡಿ ಕಿನ್ನಿಗೋಳಿ ರಸ್ತೆಯ ಇಂದ್ರ ನಗರ ರೈಲ್ವೇ ಕ್ರಾಸಿಂಗ್ ಬಳಿ ಮೇಲ್ಸೇತುವೆಗೆ ಸ್ಥಳೀಯರು ಬೇಡಿಕೆ ಸಲ್ಲಿಸಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷದಿಂದ ಕನಸಾಗಿಯೇ ಉಳಿದಿದೆ.
Kshetra Samachara
21/01/2022 05:14 pm