ಮಂಗಳೂರು: ಅಸಮರ್ಪಕ ಒಳಚರಂಡಿ ವ್ಯವಸ್ಥೆ ಪರಿಣಾಮ ಬಾಧಿಸುವ ಕೃತಕ ನೆರೆಯಿಂದ ಪಾರಾಗಲು ಇಲ್ಲೊಬ್ಬರು ಮನೆಯನ್ನೇ ಮೂರಡಿ ಮೇಲೆ ಲಿಫ್ಟ್ ಮಾಡುವ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ರಾಜಕಾಲುವೆಯಿಂದ ಸಮರ್ಪಕ ಹೂಳೆತ್ತುವ ಕಾರ್ಯವಾಗದ್ದರಿಂದ ಸೆಪ್ಟೆಂಬರ್ ಬಳಿಕದ ಮಳೆಗೆ ನಗರದ ಕೊಟ್ಟಾರ ಚೌಕಿ, ಮಾಲೇಮಾರ್, ಮಾಲಾಡಿ ಪ್ರದೇಶಗಳಲ್ಲಿ ಭಾರಿ ಮಳೆಗೆ ಕೃತಕ ನೆರೆ ಬಾಧಿಸುವುದು ಸಾಮಾನ್ಯ. ಆಗ ಇಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ.
ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ದೊರಕಲೇ ಇಲ್ಲ. ಆದ್ದರಿಂದ ಈ ಸಂಕಷ್ಟದಿಂದ ಪಾರಾಗಲು ಮಾಲೇಮಾರ್ ಸುರೇಶ್ ಉಡುಪ ಎಂಬವರು ತಮ್ಮ ಮನೆಯನ್ನೇ ಮೂರಡಿ ಮೇಲೆತ್ತಿಸಲು ನಿರ್ಧರಿಸಿದರು. ಈ ಹೌಸ್ ಲಿಫ್ಟಿಂಗ್ ಡಿ. 9ರಂದು ಆರಂಭವಾಗಿದ್ದು, ಇದೀಗ ಪೂರ್ಣವಾಗಿದೆ.
ಮನೆ ಗೋಡೆಯ ಫ್ಲಿಂತ್ ಪಿಲ್ಲರ್ ಅಡಿಭಾಗದಲ್ಲಿ 2 ಅಡಿ ಆಳ ಅಗೆದು 7 ಇಂಚು ಬೆಡ್, ಕಬ್ಬಿಣದ ರಾಡ್ ಅಳವಡಿಸಲಾಯಿತು. ಆ ಬಳಿಕ ಮನೆ ಸುತ್ತಲೂ 200ರಷ್ಟು ಜಾಕ್ ಅಳವಡಿಸಲಾಗಿದೆ. ಈ ಜಾಕ್ ತಿರುಗಿಸಿದಾಗ ಮನೆ ಸೀಳು, ಕ್ರ್ಯಾಕ್ಗಳಾಗದೆ ಎತ್ತರಕ್ಕೆ ಹೋಗುತ್ತದೆ. ಬಳಿಕ ಒಂದೊಂದೇ ಜಾಕ್ ತೆಗೆದು ತಳಪಾಯಕ್ಕೆ ಕಬ್ಬಿಣ, ಸಿಮೆಂಟು ಸೇರಿಸಿ ಕೆಂಪುಕಲ್ಲಿನಿಂದ ಕಟ್ಟಲಾಗುತ್ತದೆ.
ವಿಶೇಷವೆಂದರೆ ಮನೆ ಲಿಫ್ಟ್ ಮಾಡುವಾಗ ಮನೆಗೆ ಯಾವುದೇ ತೊಂದರೆ, ಕ್ರ್ಯಾಕ್ ಆಗುವುದಿಲ್ಲ. ಗೋಡೆ ಬಣ್ಣವೂ ಹಾಳಾಗುವುದಿಲ್ಲ. ಹರಿಯಾಣದ 12 ಕಾರ್ಮಿಕರು ನಾಜೂಕಿನಿಂದ ಹೌಸ್ ಲಿಫ್ಟಿಂಗ್ ಮಾಡುತ್ತಿದ್ದು, 1000 ಚದರ್ ಅಡಿ ಮನೆಯನ್ನು ಒಂದು ತಿಂಗಳೊಳಗೆ ಸಂಪೂರ್ಣ ಲಿಫ್ಟ್ ಮಾಡಲಾಗುತ್ತದೆ. ಈ ಕಾಮಗಾರಿಗೆ ಒಂದು ಚದರ ಅಡಿಗೆ 250 ರೂ. ಶುಲ್ಕವಿದೆ.
Kshetra Samachara
01/01/2022 10:10 am