ವರದಿ: ರಹೀಂ ಉಜಿರೆ
ಮಣಿಪಾಲ: ಕರಾವಳಿಯಲ್ಲಿ ಮಳೆ ಇನ್ನೂ ನಿಂತಿಲ್ಲ. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಮಣಿಪಾಲದಿಂದ ಅಲೆವೂರು ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ವಾಹನ ಸವಾರರಿಗೆ ಅಧ್ವಾನವಾಗಿ ಪರಿಣಮಿಸಿದೆ. ರಸ್ತೆಯ ಇಕ್ಕೆಲಗಳಲ್ಲಿ ಹೊಂಡ ತೋಡಲಾಗುತ್ತಿದ್ದು, ಇನ್ನೊಂದೆಡೆ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ!
ಇಲ್ಲಿ ಕಾಣುತ್ತಿರುವುದು ಮಣಿಪಾಲ ಅಲೆವೂರು ರಸ್ತೆ ಅಭಿವೃದ್ಧಿ ಕಾರ್ಯ ಕಾಮಗಾರಿಯ ದೃಶ್ಯ. 2016ರಲ್ಲಿ ಈ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ಸಿಕ್ಕಿದ್ದರೂ ಬೇರೆ ಬೇರೆ ಕಾರಣಗಳಿಂದ ಕಾಮಗಾರಿ ಪ್ರಾರಂಭಗೊಂಡಿರಲಿಲ್ಲ.ಮೊದಲೇ ಅಕಾಲಿಕ ಮಳೆಯಿಂದ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ವಾಹನ ಸವಾರರು ಪರದಾಡಬೇಕಾಗಿದೆ. ಇದೀಗ ತರಾತುರಿಯಲ್ಲಿ ಕಾಮಗಾರಿ ಕೈಗೊಂಡಿರುವುದರಿಂದ ವಾಹನ ಸವಾರಿಗೆ ಮತ್ತಷ್ಟು ಸಮಸ್ಯೆಯಾಗಿ ಪರಿಣಮಿಸಿದೆ.ರಸ್ತೆ ಅಭಿವೃದ್ಧಿ ಹೆಸರಲ್ಲಿ ರಸ್ತೆ ಬದಿ ಹೊಂಡಗಳನ್ನು ತೋಡಲಾಗುತ್ತಿದೆ. ಇನ್ನೊಂದೆಡೆ ಚರಂಡಿ ನೀರು ಕೂಡ ರಸ್ತೆಯಲ್ಲಿ ಹರಿದು ಹೋಗುತ್ತಿದ್ದು ಮಣಿಪಾಲದಿಂದ ಇಂಡಸ್ಟ್ರಿಯಲ್ ಏರಿಯಾ ಮತ್ತು ಅಲೆವೂರು ಕಡೆಗೆ ಹೋಗುವವರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮಣಿಪಾಲ ಪೋಸ್ಟ್ ಆಫೀಸ್ ನಿಂದದ ಲೇಕ್ ವೀವ್ ತನಕ ಸಿಆರ್ ಎಫ್ ಫಂಡ್ ನಿಂದ ಕಾಮಗಾರಿ ನಡೆಯುತ್ತಿದ್ದರೆ ಅದರ ಮುಂದೆ ಲೋಕೋಪಯೋಗಿ ಇಲಾಖೆ ಅನುದಾನದಿಂದ ಕಾಮಗಾರಿ ನಡೆಯಲಿದೆ.ರಸ್ತೆಯ ಎರಡೂ ಕಡೆಗಳಲ್ಲಿ ಸಾಕಷ್ಟು ಮನೆಗಳು, ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಮುಂಗಟ್ಟುಗಳು ಇದ್ದು ಸಂಜೆ ವೇಳೆ ನಿರಂತರ ಮಳೆಯಾಗುತ್ತಿರುವುದರಿಂದ ದಾರಿಯಲ್ಲಿ ಹೋಗುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ಮತ್ತು ರಸ್ತೆ ಮೂಲಕ ನಡೆದುಕೊಂಡು ಹೋಗುವ ಜನರು ಸಂಬಂಧಪಟ್ಟ ಇಲಾಖೆಗೆ ಹಿಡಿಶಾಪ ಹಾಕಿಕೊಂಡು ಹೋಗಬೇಕಾಗಿದೆ. ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳು ಬೇಕು ನಿಜ. ಆದರೆ ರಸ್ತೆ ಕಾಮಗಾರಿ ಮಾಡುವ ಸಂದರ್ಭ ವೈಜ್ಞಾನಿಕ ರೀತಿಯಲ್ಲಿ ಯೋಜನೆ ಹಮ್ಮಿಕೊಂಡರೆ ವಾಹನ ಸವಾರರಿಗೂ ಜನರಿಗೂ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
Kshetra Samachara
01/12/2021 07:01 pm