ಮುಲ್ಕಿ: ಕಳೆದ ಒಂದು ವರ್ಷದಿಂದ ಕುಂಟುತ್ತಾ ಸಾಗುತ್ತಿದ್ದ ಪಡುಪಣಂಬೂರು ಕಿನ್ನಿಗೋಳಿ-ಕಟೀಲು ಸಂಪರ್ಕ ರಸ್ತೆಯ ಕಲ್ಲಾಪು ಕಿರುಸೇತುವೆ ಕಾಮಗಾರಿ ಕೊನೆಗೂ ಮುಗಿಯುತ್ತಾ ಬಂದಿದ್ದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ನೂತನ ಸೇತುವೆಗೆ ಶಾಸಕರ ನಿಧಿಯಲ್ಲಿ 10 ಲಕ್ಷ ಅನುದಾನ ಮಂಜೂರು ಮಾಡಿದ್ದು ಕಾಮಗಾರಿ ನಿಧಾನಗತಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ನಡೆದು ಮಳೆಗಾಲದಲ್ಲಿ ಸೇತುವೆ ಇಕ್ಕೆಲಗಳು ಕುಸಿಯುವ ಭೀತಿ ಉಂಟಾಗಿತ್ತು.ಅಲ್ಲದೆ ಸೇತುವೆ ಕಾಮಗಾರಿ ಮುಗಿದ ಬಳಿಕ ಸೇತುವೆಯ ಎರಡೂ ಬದಿಯಲ್ಲಿ ಹೊಂಡಗಳು ಉಂಟಾಗಿ ವಾಹನ ಸಂಚಾರ ದುಸ್ತರವಾಗಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.
ಈ ಬಗ್ಗೆ ಸ್ಥಳೀಯರ ದೂರಿನನ್ವಯ ಶಾಸಕರು ಕಾಮಗಾರಿಗೆ ಮತ್ತೆ 5 ಲಕ್ಷ ಮಂಜೂರು ಮಾಡಿದ್ದು ತಾತ್ಕಾಲಿಕ ನೆಲೆಯಲ್ಲಿ ರಸ್ತೆ ಬಂದ್ ಮಾಡಿ ಕಾಮಗಾರಿ ನಡೆಸಿದ್ದು ಸೇತುವೆ ಎರಡೂ ಬದಿ ರಸ್ತೆ ಕಾಂಕ್ರೀಟಿಕರಣಗೊಂಡಿದೆ.
ಈ ನಡುವೆ ಸೇತುವೆಯ ಒಂದು ಪಾರ್ಶ್ವದ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬ ಇದ್ದು ಸ್ಥಳಾಂತರಿಸಲು ಸ್ಥಳೀಯರು ಒತ್ತಾಯಿಸಿದ್ದರೂ ಇದುವರೆಗೂ ತೆರವುಗೊಂಡಿಲ್ಲ.
ಮೊದಲೇ ನೂತನ ಕಿರುಸೇತುವೆ ಅವೈಜ್ಞಾನಿಕ ರೀತಿಯಲ್ಲಿ ನಡೆದಿದ್ದು ಇದೀಗ ವಿದ್ಯುತ್ ಕಂಬ ತೆರವುಗೊಳಿಸದಿದ್ದರೆ ಅನೇಕ ಅಪಘಾತಗಳು ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.
Kshetra Samachara
24/11/2021 03:47 pm