ಮಂಗಳೂರು: ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಬಹುತೇಕ ಮುಖ್ಯ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದ್ದರೂ ಕೆಲವೊಂದು ವಾರ್ಡ್ ಗಳಲ್ಲಿ ಒಳರಸ್ತೆಗಳು, ಡಾಮರು ರಸ್ತೆಗಳಿನ್ನೂ ಅಭಿವೃದ್ಧಿ ಕಂಡಿಲ್ಲ. ಕೆಲವೆಡೆ ರಸ್ತೆಯ ತುಂಬೆಲ್ಲ ಗುಂಡಿ ಬಿದ್ದಿದ್ದು, ಅನುದಾನದ ಕೊರತೆಯಿಂದಾಗಿ ಆ ರಸ್ತೆಗಳಿಗೆ ಡಾಮರು ಭಾಗ್ಯ ದೊರಕಿಲ್ಲ.
ನಗರದಲ್ಲಿ ಕೆಲವೊಂದು ರಸ್ತೆ ಕಾಮಗಾರಿಗೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕೆಲವೆಡೆ ಗುಂಡಿ ಬಿದ್ದ ರಸ್ತೆಗೆ ಆಗಿಂದಾಗ್ಗೆ ತೇಪೆ ಹಚ್ಚುತ್ತಿದ್ದರೂ ಮತ್ತದೇ ಸಮಸ್ಯೆ ತಲೆದೋರುತ್ತಿದೆ. ಅಂತಹ ರಸ್ತೆಗಳಿಗೆ ಕಾಂಕ್ರೀಟ್ ಹಾಕುವ ಅವಶ್ಯಕತೆಯಿದೆ. ನಗರದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಒಳ ರಸ್ತೆಗಳು ಎಲ್ಲೆಲ್ಲಿ ಗುಂಡಿ ಬಿದ್ದಿವೆ ಎಂದು ಗುರುತಿಸಿ, ಅವುಗಳ ದುರಸ್ತಿಗೆ ಆದ್ಯತೆ ನೀಡಬೇಕಿದೆ.
ಸುಲ್ತಾನ್ ಬತ್ತೇರಿಗೆ ಗುಂಡಿಗಳ ಸ್ವಾಗತ: ನಗರದ ಪ್ರೇಕ್ಷಣೀಯ ಸ್ಥಳಗಳಾದ ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ಬೀಚ್ ಗೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಅವರಿಗೆ ವಾಹನಗಳಲ್ಲಿ ತೆರಳಲು ಉರ್ವಾ ಮಾರುಕಟ್ಟೆಯಿಂದ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಉರ್ವಾ ಮಾರುಕಟ್ಟೆ ಬಳಿಯಿಂದ ಸುಮಾರು 300 ಮೀಟರ್ ವರೆಗೆ ಕಾಂಕ್ರೀಟ್ ಹಾಕಲಾಗಿದೆ. ಬಳಿಕ ಅಲ್ಲಿಂದ ಸುಮಾರು ಒಂದು ಕಿ.ಮೀ. ಡಾಮರು ರಸ್ತೆಯಲ್ಲಿ ಸಾಗಬೇಕು. ಆದರೆ, ಕಿರಿದಾದ ರಸ್ತೆ ಗುಂಡಿ, ಅಸಮರ್ಪಕ ಹಂಪ್ಸ್ ನಿಂದ ಕೂಡಿದೆ. ಮಳೆಗಾಲದಲ್ಲಂತೂ
ಗುಂಡಿ ತುಂಬಾ ನೀರು ನಿಂತು ವಾಹನ ಸಂಚಾರಿಗಳು, ಪಾದಚಾರಿಗಳು ಸಂಕಷ್ಟ ಪಡುವಂತಾಗಿದೆ.
Kshetra Samachara
25/09/2021 04:12 pm