ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ಉಡುಪಿ ಕಡೆಗೆ ಅದಾನಿ ಕಂಪನಿಯ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಮುಲ್ಕಿ ಬಸ್ಸುನಿಲ್ದಾಣದ ಬಳಿ ಕಾಮಗಾರಿ ನಡೆಯುತ್ತಿರುವಾಗ ಕಟ್ಟಡದ ಎದುರು ಭಾಗ ಬಿರುಕುಬಿಟ್ಟಿದ್ದು ಅಪಾಯಕಾರಿಯಾಗಿ ಗೋಚರಿಸಿದೆ.
ಮೂಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಕಳೆದ ಕೆಲವು ದಿನಗಳಿಂದ ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಬುಧವಾರ ಬೆಳಿಗ್ಗೆ ನಿಲ್ದಾಣದ ಬಳಿಯ ಲಲಿತ್ ಮಹಲ್ ಕಟ್ಟಡದ ಹೋಟೆಲ್ ಎದುರು ಬದಿಯ ಕ್ಯಾಶ್ ಕೌಂಟರ್ ಬಳಿ ಹೋಟೆಲ್ ಮಾಲಕ ಅಮಿತ್ ನೋಡನೋಡುತ್ತಿದ್ದಂತೆ ಭಾರಿ ಸದ್ದು ಉಂಟಾಗಿ ಕುಸಿತ ಕಂಡಿದ್ದು ಹೋಟೆಲ್ ಒಳಗಿನ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗ ಭಯಬೀತರಾಗಿ ಕಟ್ಟಡದ ಹೊರಗೆ ಓಡಿ ಬಂದಿದ್ದಾರೆ
ಅವೈಜ್ಞಾನಿಕ ಕಾಮಗಾರಿ ಬಗ್ಗೆ ಅವರು ಕಟ್ಟಡದ ಮಾಲಕ ಹಾಗೂ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಂತೆ ಗ್ಯಾಸ್ ಪೈಪ್ಲೈನ್ ಕಾಮಗಾರಿಯಿಂದ ಸಮೀಪದಲ್ಲಿರುವ ಸುರೇಶ್ ಬಿ ಸುವರ್ಣ ಎಂಬವರ ಮತ್ತೊಂದು ಕಟ್ಟಡದ ಎದುರು ಭಾಗ ಕುಸಿತವಾಗಿದೆ ಎಂದು ಸ್ಥಳೀಯ ಕೋಳಿ ಅಂಗಡಿ ಮಾಲಕರಾದ ಜೀವನ್ ಕೋಟ್ಯಾನ್ ಗಮನಕ್ಕೆ ತಂದಿದ್ದಾರೆ
ಈ ಸಂದರ್ಭ ಲಲಿತ ಮಹಲ್ ಕಟ್ಟಡದ ಮಾಲಕ ಅವಿನಾಶ್, ಅತಿಕಾರಿಬೆಟ್ಟು ಗ್ರಾಪಂ ಸದಸ್ಯರಾದ ದಯಾನಂದ ಮಟ್ಟು, ಇಂಜಿನಿಯರ್ ಸುಜಿತ್ ಸಾಲ್ಯಾನ್ ಮತ್ತಿತರರು ಗ್ಯಾಸ್ಪೈಪ್ಲೈನ್ ಗುತ್ತಿಗೆದಾರ ಸೂರ್ಯಪ್ರಕಾಶ್ ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಗುತ್ತಿಗೆದಾರ ತನ್ನ ಕಾಮಗಾರಿಯ ಬಗ್ಗೆ ಸಮರ್ಥನೆ ವ್ಯಕ್ತಪಡಿಸುತ್ತಿದ್ದಂತೆ ಸ್ಥಳೀಯರು ಕಾಮಗಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವೈಜ್ಞಾನಿಕ ಕಾಮಗಾರಿಯಿಂದ ಕಟ್ಟಡಕ್ಕೆ ತೀವ್ರ ತೊಂದರೆಯಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.
ಈ ಸಂದರ್ಭ ಲಲಿತ್ ಮಹಲ್ ಕಟ್ಟಡದ ಮಾಲೀಕರಾದ ಅವಿನಾಶ್ "ಪಬ್ಲಿಕ್ ನೆಕ್ಸ್ಟ್" ಜೊತೆ ಮಾತನಾಡಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು 14 ಫಿಟ್ ಆಳದಲ್ಲಿ ಹಾಕಬೇಕಾಗಿದ್ದ ಪೈಪುಗಳನ್ನು ಕೇವಲ 4 ಫೀಟ್ ಮೇಲ್ಗಡೆ ಹಾಕಲಾಗಿದ್ದು ಕಟ್ಟಡದ ಎದುರು ಭಾಗ ಬಿರುಕು ಬಿಟ್ಟಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ.
ಗುತ್ತಿಗೆದಾರರು ಇವತ್ತು ಕಾಮಗಾರಿ ನಡೆಸಿ ಹೋಗುತ್ತಾರೆ ನಾಳೆ ಕಟ್ಟಡ ಕುಸಿತವಾಗಿ ಪ್ರಾಣ ಹಾನಿ ಯಾರು ಹೊಣೆ? ಎಂದು ಆತಂಕ ವ್ಯಕ್ತಪಡಿಸಿದ್ದು ಕಟ್ಟಡಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
Kshetra Samachara
28/07/2021 04:32 pm