ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣ ಬಳಿಯ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ದಾನಿಗಳಿಂದ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 'ಸ್ವಚ್ಛಾಂಗಣ' ಶೌಚಾಲಯ ಸೇವೆ ನಿರ್ವಹಿಸದೆ ಬೀಗ ಜಡಿದುಕೊಂಡಿದೆ.
ಇದರಿಂದಾಗಿ ಯಾತ್ರಿಕರು, ಭಕ್ತಾದಿಗಳು ಮಲ- ಮೂತ್ರ ವಿಸರ್ಜನೆಗೆ ತೋಡು, ಪೊದೆ, ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆಗೊಳಿಸಿರುವ ವಾಹನದ ಮರೆಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಬಯಲು ಶೌಚಾಲಯದ ಪರಿಣಾಮ ರಾಜಾಂಗಣ ಪರಿಸರವು ಸ್ವಚ್ಛಾಂಗಣ ಆಗುವುದರ ಬದಲು, ಮಲಿನಾಂಗಣ ಆಗುತ್ತಿರುವುದು ಕಂಡುಬಂದಿದೆ.
ಭಕ್ತರು- ಯಾತ್ರಿಕರು, ಮಹಿಳೆಯರು ಎದುರಾಗಿರುವ ಈ ಪರಿಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆಗೊಂಡಿರುವ ಶುಲ್ಕ ಪಾವತಿಸಿ ಬಳಸುವ ಮೂತ್ರಾಲಯ, ಸ್ನಾನಗೃಹ ಒಳಗೊಂಡಿರುವ ಬೃಹತ್ ಶೌಚಾಲಯ ಇದಾಗಿದೆ. ಇಲ್ಲಿ ಎದುರಾಗಿರುವ ಪರಿಸ್ಥಿತಿಯಿಂದಾಗಿ ಹೊರಜಿಲ್ಲೆ- ಹೊರರಾಜ್ಯದ ಯಾತ್ರಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲಾಡಳಿತವು ಸ್ವಚ್ಛಾಂಗಣ ಶೌಚಾಲಯದ ಬೀಗ ತೆರವುಗೊಳಿಸಿ ಯಾತ್ರಿಕರ, ಸಾರ್ವಜನಿಕರ ಬಳಕೆಗೆ ಒದಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.
Kshetra Samachara
27/01/2021 12:24 pm