ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೂಡುತೋನ್ಸೆ: ಇಮ್ಮಡಿ ದೇವರಾಯನ ಶಿಲಾಶಾಸನ ಪತ್ತೆ

ಉಡುಪಿ: ಕಲ್ಯಾಣಪುರ ಪಂಚಾಯತ್ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು-ನಡಂಬಳ್ಳಿಯಲ್ಲಿ ಬರುವ ಮುದಲಕಟ್ಟ ಪ್ರದೇಶದ ಶ್ರೀ ಗುಂಡು ಶೆಟ್ಟಿಯವರ ಜಾಗದಲ್ಲಿ ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನವು ಪತ್ತೆಯಾಗಿದೆ.

ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಇದರ ಅಧ್ಯಯನ ನಿರ್ದೇಶಕರಾದ ಎಸ್.ಎ. ಕೃಷ್ಣಯ್ಯ ಮತ್ತು ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರಾದ ಕೆ. ಶ್ರೀಧರ ಭಟ್ ಇವರ ನೇತೃತ್ವದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ನಡೆಸಿರುತ್ತಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ಕನ್ನಡ ಲಿಪಿಯ 24 ಸಾಲುಗಳನ್ನು ಒಳಗೊಂಡಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವಿರುವ ಶಾಸನದ ಬಹು ಭಾಗವು ಸಂಪೂರ್ಣವಾಗಿ ಸವೆದು ಹೋಗಿದೆ. ಶ್ರೀ ಗಣಾಧಿಪತೆಯೇ ನಮಃ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1353 ರ (ಕ್ರಿ.ಶ 1431) ವಿರೋಧಿಕೃತ ಸಂವತ್ಸರಕ್ಕೆ ಸೇರಿದೆ. ಈ ಸಂದರ್ಭದಲ್ಲಿ ಬಾರಕೂರು ನಾಡನ್ನು ಇಮ್ಮಡಿ ದೇವರಾಯನ ನಿರೂಪದಿಂದ ಮಹಾಪ್ರಧಾನ ಚಂಡರಸ ಒಡೆಯನು ಆಳ್ವಿಕೆ ನಡೆಸುತ್ತಿದ್ದ.

ಈ ಕಾಲಘಟ್ಟದಲ್ಲಿ ದೇವರ ಪರ್ವದ ಮೂರು ದಿನದ ಹಬ್ಬಕ್ಕೆ ದಾನ ನೀಡಿರುವುದು ಶಾಸನದಿಂದ ತಿಳಿದು ಬರುತ್ತದೆ. ಈ ದಾನಕ್ಕೆ ಮಂಜಣ್ಣ ಸೆಟ್ಟಿ ಹಾಗೂ ಆತನ ಅಳಿಯ ಕೋಮ ಸೆಟ್ಟಿಯ ಒಪ್ಪ, ಬ್ರಹ್ಮರ ಊರು ಏಳು ಮಂದಿಯ ಒಪ್ಪ, ಕಂಚಿಯ ಕಬ್ಬೆಯ ಹೊಣೆಯನ್ನು ಉಲ್ಲೇಖಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಶಾಸನವು ತ್ರುಟಿತಗೊಂಡಿರುವುದರಿಂದ ಯಾವ ದೇವರ ಯಾವ ಪರ್ವದ ಹಬ್ಬಕ್ಕೆ ದಾನ ನೀಡಿರುವುದು ಎಂಬುವುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಶ್ರೀ ಆನಂದ ಬಂಗೇರ ಹಾಗೂ ಸ್ಥಳೀಯರು ಸಹಕಾರ ನೀಡಿರುತ್ತಾರೆ.

Edited By : Nagesh Gaonkar
PublicNext

PublicNext

08/05/2022 03:40 pm

Cinque Terre

60.02 K

Cinque Terre

0

ಸಂಬಂಧಿತ ಸುದ್ದಿ