ವರದಿ: ರಹೀಂ ಉಜಿರೆ
ಬ್ರಹ್ಮಾವರ:ಇದು ಬರೋಬ್ವರಿ ಇಪ್ಪತ್ತು ವರ್ಷಗಳಿಂದ ಬೀಗ ಜಡಿದಿರುವ ಕಾರ್ಖಾನೆ. ಕಾರ್ಖಾನೆಗೆ ಶೆಟರ್ ಎಳೆದು ಇಪ್ಪತ್ತು ವರ್ಷಗಳ ಬಳಿಕ, ತುಕ್ಕು ಹಿಡಿದಿರುವ ಯಂತ್ರಗಳಿಗೆ ಮತ್ತೆ ಜೀವ ಬರುವ ಲಕ್ಷಣ ಗೋಚರವಾಗಿದೆ.ಹೌದು.... ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡುವ ಪ್ರಯತ್ನಗಳು ನಡೆಯುತ್ತಿವೆ...
ಪಾಳುಬಿದ್ದ ಭೂತ ಬಂಗಲೆಯನ್ನು ನೆನಪಿಸುವ ಈ ಬೃಹದಾಕಾರದ ಕಟ್ಟಡ ,ಹಿಂದೊಮ್ಮೆ ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಾಗಿತ್ತು! ಹೌದು... ಒಂದು ಕಾಲದಲ್ಲಿ ರಾಜ್ಯದ ಪ್ರತಿಷ್ಟಿತ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಈ ಕಾರ್ಖಾನೆಗಿತ್ತು. ಸಹಕಾರಿ ತತ್ವದಲ್ಲಿ ಆರಂಭವಾದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಯೂ ಇತ್ತು. ದುರಾದೃಷ್ಟವಷಾತ್ ನಷ್ಟದಿಂದ ಕಾರ್ಖಾನೆ ಲಾಕೌಟ್ ಆಯ್ತು.ಕಾರ್ಖಾನೆ ಮುಚ್ಚಿದ ಬಳಿಕ ಕರಾವಳಿಯ ರೈತರು ಕಬ್ಬು ಬೆಳೆಯುವುದನ್ನೆ ಬಿಟ್ಟಿದ್ದರು. ಆದರೆ ರೈತರು ಮತ್ತೆ ಕಬ್ಬು ಅರಿಯುವ ಕನಸು ಕಾಣುತ್ತಿದ್ದಾರೆ. ಎಥೆನಾಲ್ ಉತ್ಪಾದನೆಗೆ ಹೇರಳ ಸಬ್ಸಿಡಿ ನೀಡಿ ಪ್ರೋತ್ಸಾಹಿಸಲು ನರೇಂದ್ರ ಮೋದಿ ಮುಂದಾಗಿದ್ದಾರೆ. ಈ ಬೆನ್ನಲ್ಲೇ ಆರು ಸಾವಿರ ರೈತರು ಕಬ್ಬು ಬೆಳೆಯಲು ಒಲವು ತೋರಿದ್ದಾರೆ. ಕಬ್ಬು ಅರೆಯುವ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದಿಸಲು ಉತ್ತಮ ಅವಕಾಶ ಇದೆ. ಹಾಗಾಗಿ ಸರ್ಕಾರದ ನೆರವಿನಿಂದ ಮತ್ತೆ ಸಕ್ಕರೆ ಉತ್ಪಾದನೆಗೆ ಆಡಳಿತ ಮಂಡಳಿ ಕಾರ್ಯಕ್ರಮ ರೂಪಿಸುತ್ತಿದೆ.
ಪೆಟ್ರೋಲಿಯಂ ಉತ್ಪನ್ನಗಳ ದರ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗಾಗಿ ಬದಲಿ ಇಂಧನ ಮೂಲವಾಗಿ ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿದೆ. ಒಂದು ವೇಳೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾದದರೆ, ಮಂಗಳೂರಿಲ್ಲಿರುವ ಬೃಹತ್ ಕೈಗಾರಿಕೆಗಳಿಗೆ ಇಲ್ಲಿನ ಎಥೆನಾಲ್ ಬಳಸಬಹುದು ಎನ್ನುವ ಚಿಂತನೆಗೆ ಜೀವ ಸಿಕ್ಕಿದೆ. ಈಗಾಗಲೇ ಮಂಡ್ಯ ಜಿಲ್ಲೆಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಕಬ್ಬಿನ ಗಿಡಗಳನ್ನು ತರಿಸಿ ನಾಟಿ ಮಾಡಲಾಗಿದೆ. ಪಾಳು ಬಿದ್ದ ಕಾರ್ಖಾನೆಯಲ್ಲೇ ಕಬ್ಬು ಸಸಿಗಳ ವಿತರಣೆಯೂ ನಡೆಯುತ್ತಿದೆ.ಈ ಪ್ರಯತ್ನ ಸ್ಥಳೀಯರಲ್ಲಿ ಹೊಸ ಭರವಸೆ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಹೊಸ ಯೋಜನೆಗೆ ಜೀವ ತುಂಬಲು ಸಹಕಾರಿಗಳು ಮುಂದಾಗಿದ್ದಾರೆ. ಒಂದು ವೇಳೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಕಬ್ಬು ಅರೆಯಲು ಆರಂಭವಾದರೆ ಮತ್ತೊಮ್ಮೆ ಜಿಲ್ಲೆಯ ಆರ್ಥಿಕತೆ ಪುಟಿದೇಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.
Kshetra Samachara
11/08/2021 09:20 pm