ವರದಿ: ರಹೀಂ ಉಜಿರೆ
ಮಲ್ಪೆ : ಇದು ಪಬ್ಲಿಕ್ ನೆಕ್ಸ್ಟ್ ವರದಿ ಫಲಶೃತಿ. ಎರಡು ದಿನಗಳ ಹಿಂದೆ ಪ್ರವಾಸಿಗರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪಬ್ಲಿಕ್ ನೆಕ್ಸ್ಟ್ ಮಲ್ಪೆ ಬೀಚ್ ಎಷ್ಟು ಸುರಕ್ಷಿತ? ಎಂಬ ವಿಸ್ತೃತ ವರದಿ ಪ್ರಕಟಿಸಿತ್ತು.ವರದಿಯಲ್ಲಿ ಪ್ರವಾಸಿಗರಿಗಿರುವ ಅಪಾಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿ ಸ್ಥಳೀಯಾಡಳಿತದ ಗಮನ ಸೆಳೆಯಲಾಗಿತ್ತು.
ನಮ್ಮ ವರದಿ ಪ್ರಕಟವಾದ ಎರಡೇ ದಿನದಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸಮುದ್ರಕ್ಕೆ ಅಕ್ಷರಶಃ ಬೇಲಿ ಹಾಕಲಾಗಿದೆ. ಹೌದು...ಇನ್ನು ಮಲ್ಪೆ ಕಡಲಕಿನಾರೆಗೆ ಬರುವ ಪ್ರವಾಸಿಗರು ಸೆಪ್ಟೆಂಬರ್ ತನಕ ನೀರಿಗಿಳಿಯದಂತೆ ನಿಷೇಧ ಮಾಡಲಾಗಿದೆ.ಕಡಲ ಕಿನಾರೆಯ ಉದ್ದಕ್ಕೂ ನೀರಿಗಿಳಿಯದಂತೆ ನೆಟ್ ಮತ್ತು ಸೂಚನಾ ಫಲಕ ಹಾಕಲಾಗಿದ್ದು ,ನೀರಿಗಿಳಿದರೆ ಐನೂರು ರೂ.ದಂಡ ತೆರಬೇಕು!
ಇತ್ತೀಚಿಗೆ ಮಲ್ಪೆ ಸಮುದ್ರದಲ್ಲಿ 4 ಜನ ಪ್ರವಾಸಿಗರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಕೊನೆಗೆ ಮೂವರು ಬದುಕುಳಿದು ಓರ್ವ ಯುವತಿ ಸಾವನ್ನಪ್ಪಿದಳು. ಸದ್ಯ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಅಲೆಗಳ ಅಬ್ಬರ ಕೂಡ ಜೋರಾಗಿದೆ. ಮಲ್ಪೆ ಸಮುದ್ರ ಡೆಂಜರಾಗಿ ಮಾರ್ಪಟ್ಟಿದೆ. ಈಗೇನಿದ್ದರೂ ಬೀಚ್ ಗೆ ಬರುವವರು ಮರಳಲ್ಲಿ ಮಾತ್ರ ಆಡಲು ಅವಕಾಶವಿದೆ. ನೀರಿಗಿಳಿದು ಅಪಾಯ ಮೈಮೇಲೆ ಎಳೆದುಕೊಳ್ಳುವಂತಿಲ್ಲ.ಈ ಆದೇಶ ಸಪ್ಟೆಂಬರ್ 15 ವರೆಗೂ ಮುಂದುವರಿಯಲಿದೆ.
ಜಿಲ್ಲಾಡಳಿತದ ಈ ಆದೇಶದ ಬಗ್ಗೆ ಪ್ರವಾಸಿಗರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ಸಮುದ್ರದ ಅಲೆಗಳ ಜೊತೆಗೆ ಆಟ ಆಡಬೇಕು ಎಂದು ದೂರದಿಂದ ಬಂದಿದ್ದ ಸಾವಿರಾರು ಪ್ರವಾಸಿಗರು ಇಲ್ಲಿಯ ಎಚ್ಚರಿಕೆ ಫಲಕ ನೋಡಿ ಬೇಸರ ತೋಡಿಕೊಂಡರು. ಹೀಗಾಗಿ ಸಮುದ್ರದ ಅಲೆಗಳ ಜೊತೆಗೆ ಆಟವಾಡಲು ಬಂದವರು ದೂರದಿಂದಲೇ ಸಮುದ್ರ ನೋಡಿಕೊಂಡು ದಡದಲ್ಲೇ ಆಟವಾಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಸದ್ಯ ಬೀಚ್ ಗೆ ಕಾವಲು ಬೇಲಿಯ ಜೊತೆಗೆ ಇಬ್ಬರು ಕಾವಲುಗಾರರು ಇಡೀ ದಿನ ಕಾವಲು ನಿಲ್ಲುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಮಲ್ಪೆ ಬೀಚ್ ಗೆ ಬರುವ ಪ್ರವಾಸಿಗರು ಸದ್ಯದ ಮಟ್ಟಿಗೆ ಪ್ಲಾನ್ ಚೇಂಜ್ ಮಾಡಿಕೊಳ್ಳಿ.ನಿಮ್ಮ ಹಿತದೃಷ್ಟಿಯಿಂದ ಸೆಪ್ಟೆಂಬರ್ 15 ರತನಕ ಬೀಚ್ ನತ್ತ ಬರಬೇಡಿ.ಕಡಲು ಶಾಂತವಾದ ಬಳಿಕವಷ್ಟೆ ಇತ್ತ ಕಡೆ ಪ್ರವಾಸಕ್ಕೆ ಬನ್ನಿ.
Kshetra Samachara
06/08/2021 06:03 pm