ಮೂಡುಬಿದಿರೆ: ಉತ್ತರ ಪ್ರದೇಶದ ಜನರು, ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರ ಮೇಲೆ ಭರವಸೆ ಇಟ್ಟು ಅಧಿಕಾರಕ್ಕೆ ತಂದಿದ್ದಾರೆ. ಅತ್ಯಾಚಾರ ಸಹಿತ ಹೀನ ಕೃತ್ಯಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿವೆ. ಹಾಥರಸ್ ಪ್ರಕರಣದಲ್ಲಿ ಅಲ್ಲಿನ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಥರಸ್‍ನ ಯುವತಿಯ ಅತ್ಯಾಚಾರ, ನಿಗೂಡ ಸಾವಿನ ಪ್ರಕರಣದಲ್ಲಿ ಪೊಲೀಸ್ ಇಲಾಖೆಯು ಅಮಾನವೀಯವಾಗಿ ನಡೆದುಕೊಂಡಿದೆ. ಯುವತಿಯ ಮನೆಯವರಿಗೆ ಅಂತಿಮದರ್ಶನವನ್ನು ಮಾಡಲು ಅವಕಾಶ ಮಾಡಿಕೊಡದಿರುವುದು ತಪ್ಪು. ಇಂತಹ ಪ್ರಕರಣಗಳು ಆಗುವ ಸಂದರ್ಭದಲ್ಲಿ ಯೋಗಿ ಸರ್ಕಾರದ ಇಂತಹ ನಡೆಯ ವಿರುದ್ಧ ಉಗ್ರ ಪ್ರತಿಭಟನೆ ಅನಿವಾರ್ಯ ಎಂದರು.
ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಮಾತ್ರ ಪರಿಹಾರವಲ್ಲ, ಮುಂಜಾಗ್ರತೆಯಿಂದ ಸರ್ಕಾರ ಯೋಜನೆಯನ್ನು ರೂಪಿಸಿ, ಅನುಷ್ಠಾನ ಮಾಡಿದ್ದರೆ ಕೊರೊನಾ ನಿಯಂತ್ರಣ ಮಾತ್ರವಲ್ಲ, ಜನರ ಆರ್ಥಿಕ ಸ್ಥಿತಿಯು ಸುಧಾರಣೆಯಲ್ಲಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಸಂತೋಷ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
03/10/2020 07:38 pm