ಬ್ರಹ್ಮಾವರ: ಬ್ರಹ್ಮಾವರ ತಾಲೂಕು ರಚನೆ ಆಗಿ ಐದು ವರ್ಷಗಳಾಗುತ್ತಾ ಬಂತು. ಆದರೆ ತಾಲೂಕು ಪಂಚಾಯತ್ ಕಚೇರಿ, ನ್ಯಾಯಾಲಯ ಸಂಕೀರ್ಣ ,ಉಪಖಜಾನೆ ಸಹಿತ ಪ್ರಮುಖ ಸರಕಾರಿ ಕಚೇರಿಗಳೇ ಇನ್ನೂ ಕಾರ್ಯಾರಂಭ ಆಗಿಲ್ಲ. ಇವೆಲ್ಲ ಕಚೇರಿಗಳಿಗೆ ಸೂಕ್ತ ಸ್ಥಳಾವಕಾಶ ಬೇಕು.ಇದೀಗ ಈ ಎಲ್ಲ ಸರಕಾರಿ ಕಚೇರಿಗಳಿಗೆ ಸ್ಥಳಾವಕಾಶ ಸೂಚಿಸಿ ಬ್ರಹ್ಮಾವರ ಫೌಂಡೇಶನ್ ನ್ಯಾಯಯುತ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದೆ. ಅದು ಇಲ್ಲಿನ ಆಕಾಶವಾಣಿ ಕೇಂದ್ರದಲ್ಲಿ ಪಾಳುಬಿದ್ದಿರುವ ಜಾಗ!
ಹೌದು ,1976 ರಲ್ಲಿ ಪ್ರಾರಂಭಗೊಂಡ ಆಕಾಶವಾಣಿ ಕೇಂದ್ರದಲ್ಲಿ ಬರೋಬ್ಬರಿ 21.72 ಎಕರೆ ಜಾಗ ಇದೆ.ಈ ಜಾಗದಲ್ಲಿ ಬಹುತೇಕ ಪೊದೆ, ಕಾಡು ಬೆಳೆದು ಪಾಳು ಬಿದ್ದಿದೆ. ಇದನ್ನು ಸರಕಾರಿ ಕಚೇರಿಗಳಿಗೆ ಸದ್ಬಳಕೆ ಮಾಡಬಹುದು ಎಂಬುದು ಬ್ರಹ್ಮಾವರ ಫೌಂಡೇಶನ್ ನ ಆಗ್ರಹ. ಇಲ್ಲಿರುವ ಆಕಾಶವಾಣಿ ಕೇಂದ್ರಕ್ಕೆ ಇಷ್ಟೊಂದು ಜಾಗದ ಅವಶ್ಯಕತೆ ಖಂಡಿತ ಇಲ್ಲ. ಬೇರೆ ಬೇರೆ ಜಿಲ್ಲೆಗಳಲ್ಲಿರುವಂತೆ ಎರಡರಿಂದ ಮೂರೆಕರೆ ಜಾಗ ಆಕಾಶವಾಣಿಗೆ ಸಾಕು, ಉಳಿದ ಜಾಗವನ್ನು ರಾಜ್ಯ ಸರಕಾರದ ಕಂದಾಯ ಇಲಾಖೆ ಸುಪರ್ದಿಗೆ ತೆಗೆದುಕೊಂಡರೆ ಬ್ರಹ್ಮಾವರ ತಾಲೂಕಿನ ಅಭಿವೃದ್ದಿ ವೇಗ ಪಡೆದುಕೊಳ್ಳುತ್ತದೆ ಎಂಬುದು ಸದ್ಯ ಸ್ಥಳೀಯರ ವಾದವಾಗಿದೆ.
ತಾಲೂಕು ರಚನೆಯಾಗಿ 5 ವರ್ಷಗಳಾಗುತ್ತಾ ಬಂದರೂ ಇಲ್ಲಿನ ಜನ ತಮ್ಮ ಕೆಲಸ ಕಾರ್ಯಗಳಿಗೆ ಈಗಲೂ ಪಕ್ಕದ ಊರುಗಳಿಗೆ ಹೋಗುವ ಅನಿವಾರ್ಯತೆ ಇದೆ.ಬ್ರಹ್ಮಾವರ ಬಾರ್ಕೂರು ಜಂಕ್ಷನ್ ನಲ್ಲಿ ಹತ್ತಾರು ಎಕರೆ ಪಾಳುಬಿದ್ದಿದೆ. ಈ ಜಾಗದಲ್ಲಿ ಸುಸಜ್ಜಿತ ಸರಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣಗೊಂಡರೆ ಜಾಗದ ಸಮಸ್ಯೆಯೂ ಪರಿಹಾರ ವಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಪಾಳುಬಿದ್ದಿರುವ ಜಾಗವನ್ನು ಸರಕಾರ ಸ್ವಾಧೀನಕ್ಕೆ ಪಡೆದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.
ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ 52 ಗ್ರಾಮಗಳಿದ್ದು, 27 ಗ್ರಾಮ ಪಂಚಾಯತ್ ಗಳಿವೆ. ಅಂದಾಜು 131203 ಜನಸಂಖ್ಯೆ ಇದೆ. ಇಷ್ಟೊಂದು ದೊಡ್ಡ ತಾಲೂಕಿನ ಜನರಿಗೆ ಸರಕಾರಿ ಕಚೇರಿಗಳು ಅತ್ಯಗತ್ಯವಾಗಿ ಬೇಕಾಗಿದೆ.ಆದ್ದರಿಂದ ಸರಕಾರ ಮತ್ತು ಕಂದಾಯ ಇಲಾಖೆ ಇತ್ತ ಕಡೆ ಗಮನ ಹರಿಸಬೇಕು ಎಂಬುದು ಇಲ್ಲಿನ ಪ್ರಜ್ಞಾವಂತರ ಆಗ್ರಹವಾಗಿದೆ.
Kshetra Samachara
13/10/2022 04:59 pm