ವರದಿ: ರಹೀಂ ಉಜಿರೆ
ಉಡುಪಿ: ಇದು ಒಂದು ಕಾಲದ ಸಾಹಸಿ ಉದ್ಯಮಿ ,ದುಬೈ ಶೆಟ್ಟರು ಎಂದೇ ಖ್ಯಾತಿಗೊಂಡಿದ್ದ ಬಿ.ಆರ್ ಶೆಟ್ಟರ ಪತನದ ಪಳೆಯುಳಿಕೆ..ತಮ್ಮ ಹೆತ್ತವರ ಹೆಸರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದು ನಿರ್ಮಾಣ ಹಂತದಲ್ಲಿರುವಾಗಲೇ ಬಿ.ಆರ್ ಶೆಟ್ಟಿ ದಿವಾಳಿಯಾದರು.ಶೆಟ್ಟರ ದಿವಾಳಿಯ ಪಳೆಯುಳಿಕೆಯಂತಿರುವ ಕೃತಕ ಸ್ವಿಮ್ಮಿಂಗ್ ಫೂಲ್ ಒಂದು ಉಡುಪಿಯ ಹೃದಯಭಾಗದಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ...ಏನಿದು ಸ್ವಿಮ್ಮಿಂಗ್ ಫೂಲ್ ನ ಹಿನ್ನೆಲೆ?
ಇದು ಒಂದು ಕಾಲದಲ್ಲಿ ದುಬೈ ಶೆಟ್ರು ಎಂದೇ ಕರೆಸಿಕೊಳ್ಳುತ್ತಿದ್ದ ಬಿ.ಆರ್ ಶೆಟ್ಟಿ ಸಾಮ್ರಾಜ್ಯ ಪತನದ ಪಳೆಯುಳಿಕೆ.ಉಡುಪಿ ನಗರದ ಹೃದಯ ಭಾಗದಲ್ಲೇ
ರಾವ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ದಾನವಾಗಿ ನೀಡಿದ್ದ ಜಾಗದಲ್ಲಿ ಕಳೆದ 7 ದಶಕಗಳಿಂದ ಬಡವರಿಗೆ ಉತ್ತಮ ಸೇವೆಯನ್ನು ಹಾಜಿ ಅಬ್ದುಲ್ಲಾ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ ನೀಡುತ್ತಿತ್ತು.ಶೆಟ್ಟರ ಕಣ್ಣು ನಗರದ ಹೃದಯಭಾಗದಲ್ಲಿದ್ದ ಸರಕಾರಿ ಆಸ್ಪತ್ರೆಯ ಮೇಲೆ ಬೀಳುತ್ತೆ!
ತನ್ನ ತವರು ಜಿಲ್ಲೆ ಉಡುಪಿಯಲ್ಲಿ ಬಿ.ಆರ್ ಶೆಟ್ಟಿ ಅವರು ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ತಯಾರಿ ನಡೆಸುತ್ತಾರೆ. ರಾಜ್ಯ ಸರ್ಕಾರದ ಜೊತೆ MOU ಮಾಡಿಕೊಂಡು ಸರಕಾರಿ ಭೂಮಿಯಲ್ಲಿ ಆಸ್ಪತ್ರೆಯ ಕಾಮಗಾರಿ ಆರಂಭಿಸುತ್ತಾರೆ. ಸರಕಾರಿ ಭೂಮಿಯನ್ನು ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಒಂದು ಉಚಿತ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸುತ್ತಾರೆ.ಶೆಟ್ಟರ ಸಾಮ್ರಾಜ್ಯ ಪತನ ಕಾಣುತ್ತಿದ್ದಂತೆ ಹೆರಿಗೆ ಆಸ್ಪತ್ರೆಯ ಭವಿಷ್ಯ ಅತಂತ್ರವಾಗಿದ್ದು ಮಾತ್ರವಲ್ಲ, ಇತ್ತ ನಿರ್ಮಾಣ ಹಂತದಲ್ಲಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಯೂ ಸ್ಥಗಿತಗೊಳ್ಳುತ್ತದೆ!ಈಗ ಅದೇ ಆಸ್ಪತ್ರೆಗಾಗಿ ತೋಡಿದ ಭಾರೀ ಗಾತ್ರದ ಗುಂಡಿ ಕೆರೆಯಾಗಿ ಮಾರ್ಪಾಡಾಗಿದೆ,ಮಾತ್ರವಲ್ಲ ಹಲವು ಅಡಿಗಳಷ್ಟು ನೀರು ತುಂಬಿ ಅಪಾಯವನ್ನು ಆಹ್ವಾನಿಸುತ್ತಿದೆ.
ಕಳೆದೆರಡು ವರ್ಷಗಳಿಂದಲೂ ಬಿ.ಆರ್ ಶೆಟ್ಟಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೆಳ ಅಂತಸ್ತಿಗಾಗಿ ತೋಡಿದ್ದ ಹೊಂಡ, ಮಳೆಗಾಲಕ್ಕೆ ಅಕ್ಷರಶಃ ಸ್ವಿಮ್ಮಿಂಗ್ ಪೂಲ್ ಆಗಿ ಮಾರ್ಪಾಡಾಗುತ್ತಿದೆ.ಇದರ ಸುತ್ತಮುತ್ತ ಸಾಕಷ್ಟು ಕಟ್ಟಡಗಳು ,ಕಚೇರಿಗಳು ,ಹೊಟೇಲುಗಳಿವೆ.ಅಂದಹಾಗೆ ಈ ಬೃಹತ್ ಗಾತ್ರದ ಕೆರೆ ನಿರ್ಮಾಣಗೊಂಡಿರುವುದು ಬೇರೆಲ್ಲೂ ಅಲ್ಲ, ನಗರಸಭೆ ಎದುರೇ ಎಂಬುದು ಗಮನಾರ್ಹ! ಅತ್ಯಂತ ಜನನಿಬಿಡ ಕೆ.ಎಂ ಮಾರ್ಗ್ ನಲ್ಲಿ ಈ ಕೃತಕ ಸ್ವಿಮ್ಮಿಂಗ್ ಫೂಲ್ ಇದ್ದು ಭೂ ಕುಸಿತ ಉಂಟಾಗುವ ಮೊದಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು
ಸದ್ಯ ಆರ್ಥಿಕವಾಗಿ ದಿವಾಳಿ ಎದ್ದಿರುವ ಬಿ.ಆರ್ ಶೆಟ್ಟಿ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವನ್ನು ಕೈ ಬಿಟ್ಟಿದ್ದಾರೆ.ಸರಕಾರಕ್ಕೂ ಈ ಸಂಬಂಧ ಪತ್ರ ಬರೆದು ತಿಳಿಸಿದ್ದಾರೆ.ಆದರೆ ಸ್ಥಳೀಯಾಡಳಿತ ಮಾತ್ರ ಅಪಾಯ ಆಹ್ವಾನಿಸುತ್ತಿರುವ ಕೃತಕ ಕೆರೆಗೆ ಅಗತ್ಯ ರಕ್ಷಣಾ ಕ್ರಮಕೈಗೊಳ್ಳದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
Kshetra Samachara
30/07/2021 11:30 am