ಉಡುಪಿ: ಉಡುಪಿ ಜಿಪಂ ಅಧ್ಯಕ್ಷರ ಜನವಿರೋಧಿ ನಿರ್ಣಯವಾದ ಉದ್ಯಾವರ ಗ್ರಾಮದಲ್ಲಿ ಕೈಗಾರಿಕಾ ಭೂ ಪರಿವರ್ತನೆಗೆ ರಾಜ್ಯ ಉಚ್ಚ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜಿಪಂ ಅಧ್ಯಕ್ಷರ ಜನವಿರೋಧಿ ಆದೇಶ ವಿರುದ್ದ ಮಾರ್ಚ್ 9 ರಂದು ಸಾರ್ವಜನಿಕ ಪ್ರತಿಭಟನೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ನಿರ್ಧರಿಸಿದಂತೆ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಸುರೇಶ್ ಅವರು, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಉದ್ಯಾವರ ಗ್ರಾಮದ ಹಿತದೃಷ್ಟಿಯಿಂದ ವೈಯುಕ್ತಿಕ ವ್ಯಾಜ್ಯ ದಾಖಲಿಸಿದ್ದರು. ಈ ವ್ಯಾಜ್ಯ ಗಮನಿಸಿದ ಉಚ್ಚ ನ್ಯಾಯಾಲಯ, ಜಿಪಂ ಅಧ್ಯಕ್ಷ ರ ಆದೇಶಕ್ಕೆ ಶಾಶ್ವತ ತಡೆಯಾಜ್ಷೆ ನೀಡಿದೆ. ಜಿಪಂ ಅಧ್ಯಕ್ಷ ರು ಜನರ ಆಶಯಗಳಿಗೆ ವಿರುದ್ಧವಾಗಿ ಜನವರಿ 1 ರಂದು ಏಕಾಏಕಿಯಾಗಿ ಗ್ರಾಮದಲ್ಲಿ ಕೈಗಾರಿಕಾ ವಲಯ ಭೂ ಪರಿವರ್ತನೆಗೆ ಆದೇಶ ನೀಡಿದ್ದರು. ಇದೀಗ ರಾಜ್ಯ ಉಚ್ಚ ನ್ಯಾಯಾಲಯ, ಜಿಪಂ ಅಧ್ಯಕ್ಷರ ಈ ನಿರ್ಣಯಕ್ಕೆ ಶಾಶ್ವತ ತಡೆಯಾಜ್ಞೆ ನೀಡಿರುವುದು ಉದ್ಯಾವರ ಗ್ರಾಮಸ್ಥರ ಪರಿಸರ ಉಳಿಸುವ ಹೋರಾಟಕ್ಕೆ ಸಿಕ್ಕ ಜಯ ಎಂದು ಸೊರಕೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಾವರ ಗ್ರಾ ಪಂ ಅಧ್ಯಕ್ಷೆ ಸುಗಂಧಿ ಶೇಖರ್, ಸದಸ್ಯ ಲಾರೆನ್ಸ್ ಡೇಸಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/09/2020 01:39 pm