ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಎಷ್ಟೇ ಹೇಳಿದರೂ ಇವುಗಳನ್ನು ಮಾರಾಟ ಮಾಡುವವರು ಹಾಗೂ ಸೇವನೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಅದರಲ್ಲೂ ಕಡಲ ತೀರದ ಜನರನ್ನು ತಂಬಾಕು ಮುಕ್ತ ಮಾಡುವುದು ಇನ್ನೂ ಕಷ್ಟ. ಆದರೆ ಉಡುಪಿಯ ಕೊಡಿಬೆಂಗ್ರೆ ಗ್ರಾಮ, ರಾಜ್ಯದಲ್ಲೇ ತಂಬಾಕು ಮುಕ್ತ ಗ್ರಾಮವಾಗಿ ಹೊರಹೊಮ್ಮಿದೆ.
ಉಡುಪಿ ಜಿಲ್ಲೆಯ ಕೊಡಿಬೆಂಗ್ರೆ ಗ್ರಾಮದಲ್ಲಿ, ಕಳೆದ 27 ವರ್ಷಗಳಿಂದ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ ಎಂದರೆ ನೀವು ನಂಬಲೇಬೇಕು. ಭೌಗೋಳಿಕವಾಗಿ ನದಿ ಮತ್ತು ಸಮುದ್ರದ ನಡುವೆ ಹರಡಿರುವ ಸ್ವಚ್ಛ, ಸುಂದರ ಮನಮೋಹಕ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕೊಡಿಬೆಂಗ್ರೆಯಲ್ಲಿ, ಹಿರಿಯರು ಮಾತ್ರವಲ್ಲದೇ ಮಕ್ಕಳು ಕೂಡಾ ಗುಟ್ಕಾ, ಪಾನ್ ಮಸಾಲ ಮುಂತಾದ ತಂಬಾಕು ಉತ್ಪನ್ನಗಳ ಚಟಕ್ಕೆ ದಾಸರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮದ ಮುಖಂಡರು ಒಂದು ಸಮಿತಿಯನ್ನು ರಚಿಸಿ ಗ್ರಾಮದ ಜನರ ಮನವೊಲಿಸಿ ತಂಬಾಕು ಸೇವನೆಗೆ ದಾಸರಾಗಿದ್ದ ಗ್ರಾಮಸ್ಥರಿಗೆ ತಂಬಾಕು ಸೇವನೆಯನ್ನು ಶಾಶ್ವತವಾಗಿ ತ್ಯಜಿಸುವಂತೆ ಮಾಡಿದ್ದಾರೆ. ಹಿಂದೆ ಕೋಡಿಬೆಂಗ್ರೆ ಗ್ರಾಮದಲ್ಲಿ ಸುಮಾರು 12 ರಷ್ಟು ಅಂಗಡಿಗಳು ಇದ್ದು ಕೇವಲ ತಂಬಾಕು ಉತ್ಪನ್ನಗಳ ಮಾರಾಟದಿಂದಲೇ ಇಲ್ಲಿ ಸಾವಿರಾರು ರೂಪಾಯಿಗಳ ವ್ಯವಹಾರ ನಡೆಯುತಿತ್ತು. ಆದರೆ ಗ್ರಾಮದ ಒಳಿತಿಗಾಗಿ ಈ ಎಲ್ಲ ಅಂಗಡಿ ಮಾಲೀಕರು ಕಳೆದ ಸುಮಾರು 25 ವರ್ಷಗಳಿಂದ ತಮ್ಮ ಅಂಗಡಿಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿಲ್ಲ. ಈ ಗ್ರಾಮಸ್ಥರ ಅವಿರತ ಶ್ರಮದ ಫಲವಾಗಿ ಇದೀಗ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವೆಂದು ಅಧಿಕೃತವಾಗಿ ಘೋಷಿಸಿದೆ.
ಹಾಗೆ ನೋಡಿದರೆ ಇಂತಹದ್ದೊಂದು ಹೆಗ್ಗಳಿಕೆ ಪಡೆದ ರಾಜ್ಯದ ಮೊಟ್ಟಮೊದಲ ಗ್ರಾಮ ಇದು. ಈ ಮೊದಲು ಕೊಡಿಬೆಂಗ್ರೆ ಗ್ರಾಮಕ್ಕೆ ತಂಬಾಕು ಮುಕ್ತ ಗ್ರಾಮ ಎಂಬ ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿತ್ತು. ಈ ಗ್ರಾಮ ರಾಜ್ಯದ ಇತರ ಗ್ರಾಮಗಳಿಗೂ ಮಾದರಿಯಾಗಲಿ ಎಂದು ಹಾರೈಸೋಣ.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
28/06/2022 07:05 pm