ಹಳೆಯಯಂಗಡಿ : ಕೊಂಕಣ ರೈಲ್ವೆ ಹಾದು ಹೋಗುವ ಹಳೆಯಂಗಡಿ ಸಮೀಪದ ಇಂದಿರಾನಗರ ಬಳಿಯ ರೈಲ್ವೇ ಗೇಟ್ ಬಳಿ ಸ್ಥಳೀಯರ ಬೇಡಿಕೆಯಾದ ಫ್ಲೈ ಓವರ್ ರಸ್ತೆ ಕನಸಾಗಿಯೇ ಉಳಿದಿದೆ.
ಮಂಗಳೂರು ಕಡೆಯಿಂದ ಹಳೆಯಂಗಡಿ ಮೂಲಕ ಪಕ್ಷಿಕೆರೆ, ಕಿನ್ನಿಗೋಳಿ ಕಟೀಲು ಸಂಪರ್ಕಿಸುವ ರಸ್ತೆಯ ಇಂದ್ರ ನಗರದಲ್ಲಿ ರೈಲ್ವೆ ಗೇಟ್ ಇದ್ದು ಸಂಚಾರ ತ್ರಾಸದಾಯಕವಾಗಿ ಪರಿಣಮಿಸಿದೆ. ಹೊಂಡಮಯವಾದ ರೈಲ್ವೇ ಗೇಟ್ ರಸ್ತೆಯಲ್ಲಿ ರೈಲು ಹೋಗುವ ಪೂರ್ವಭಾವಿಯಾಗಿ ಗಂಟೆ ಕಟ್ಟಲೆ ಹೊತ್ತು ಗೇಟ್ ಹಾಕುತ್ತಿದ್ದು ವಾಹನ ಸವಾರರು ನಿಗದಿಕ ಸಮಯಕ್ಕೆ ತಲುಪಲು ಅಸಾಧ್ಯವಾಗದೆ ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ರೈಲು ಹಾದು ಹೋಗುವ ಇಂದ್ರ ನಗರ ಬಳಿ ಫ್ಲೈ ಓವರ್ ನಿರ್ಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ,ಶಾಸಕರಿಗೆ, ಸಂಸದರಿಗೆ, ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಪೋಸ್ಟ್ ಕಾರ್ಡ್ ಚಳುವಳಿ ನಡೆಸಿ ದೂರು ನೀಡಿ ಹಲವಾರು ವರ್ಷಗಳು ಕಳೆದರೂ ಇದುವರೆಗೂ ಬೇಡಿಕೆ ಈಡೇರಿಲ್ಲ.
ಇದೇ ರೀತಿ ಪಡು ಪಣಂಬೂರು ಕಲ್ಲಾಪು, ಅತಿಕಾರಿಬೆಟ್ಟು ಕೊಲಕಾಡಿ, ಮೈಲೊಟ್ಟು ರೈಲ್ವೇ ಗೇಟ್ ಬಳಿ ರಸ್ತೆ ಅವ್ಯವಸ್ಥೆ ಹಾಗೂ ಗಂಟೆಗಟ್ಟಲೆ ಸಮಯ ರೈಲ್ವೇ ಗೇಟ್ ಹಾಕುವುದರಿಂದ ಸ್ಥಳೀಯ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.
ಕೂಡಲೇ ಸಂಸದರು ಹಾಗೂ ರೈಲ್ವೇ ಇಲಾಖೆ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಒತ್ತಾಯಿಸಿದ್ದಾರೆ.
Kshetra Samachara
04/08/2022 01:45 pm