ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆಯು ಬಾಯ್ದೆರೆದು ನಿಂತಿದ್ದು ಕುಸಿಯುವ ಭೀತಿಯಲ್ಲಿದೆ. ನಿತ್ಯವೂ ಸಾವಿರಾರು ವಾಹನಗಳು ಓಡಾಟ ನಡೆಸುವ ಈ ರಸ್ತೆಯು ಅಪಾಯದ ಅಂಚಿನಲ್ಲಿದೆ.
ಪಿವಿಎಸ್ ಬಳಿಯಲ್ಲಿರುವ ಖೈಬರ್ ರಸ್ತೆಯ ಮೇಲ್ಭಾಗದಲ್ಲಿ ದೊಡ್ಡ ಗಾತ್ರದ ತಗ್ಗು ಬಿದ್ದು ಕುಸಿತ ಕಂಡಿದೆ. ಕುಸಿತ ಕಂಡ ಸ್ಥಳದ ಮೇಲ್ಗಡೆ ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆಯಿದೆ. ಇಲ್ಲಿ ದಿನನಿತ್ಯವೂ ಜಡ್ಜ್ ಗಳು , ವಕೀಲರು, ಪೊಲೀಸರು ಸೇರಿದಂತೆ ಸಾರ್ವಜನಿಕರ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದೆ. ಆದರೆ ಇದೇ ರಸ್ತೆಯ ಅಡಿ ಭಾಗದಲ್ಲಿ ಮಣ್ಣು ಕುಸಿತ ಕಂಡು ರಸ್ತೆ ಬಾಯ್ದೆರೆದು ನಿಂತಿದೆ.
ಇದೀಗ ಈ ರಸ್ತೆ ಅಪಾಯವನ್ನು ಎದುರಿಸುತ್ತಿದ್ದು, ಮಣ್ಣು ಇನ್ನಷ್ಟು ಕುಸಿತ ಕಂಡಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
ತಕ್ಷಣ ಸಂಬಂಧಪಟ್ಟವರು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ. ಮಣ್ಣು ಇನ್ನಷ್ಟು ಕುಸಿತಗೊಂಡು ಸಮಸ್ಯೆ ಮತ್ತಷ್ಟು ಗಂಭೀರವಾಗುವ ಮುಂಚೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
Kshetra Samachara
05/07/2022 12:24 pm