ವರದಿ: ರಹೀಂ ಉಜಿರೆ
ಮಟ್ಟು: ಕಾಪು ತಾಲೂಕಿನ ಮಟ್ಟು ಪ್ರದೇಶದಲ್ಲಿ ಉತ್ತಮ ಮೂಲ ಸೌಕರ್ಯ ಎಂಬುದು ಊರಿನವರಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.ಮಟ್ಟು ಗ್ರಾಮದಲ್ಲಿ ನಿರ್ಮಾಣಗೊಂಡ ನೂತನ ಸೇತುವೆಯು ರಸ್ತೆ ಸಂಪರ್ಕ ಪಡೆಯುವಲ್ಲಿ ಇನ್ನೂ ವಿಫಲವಾಗಿದೆ. ಹಾಗೆ ನೋಡಿದರೆ ಈ ಸಂಪರ್ಕ ಸೇತುವೆ ಸಣ್ಣ ಯೋಜನೆ ಏನಲ್ಲ. ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಯೋಜನೆಯಡಿ (9,12,07,158)
ರೂ. ಅನುದಾನದಲ್ಲಿ 145.88 ಮೀ. ಉದ್ದ 10.50 ಮೀ. ಅಗಲದ ಸೇತುವೆಯ ನಿರ್ಮಾಣ ಕೆಲಸ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ ಸೇತುವೆಯ ಇಕ್ಕೆಲಗಳಲ್ಲಿ ರಸ್ತೆಯ ಸಂಪರ್ಕ ಇಲ್ಲದೆ ಬೃಹತ್ ಯೋಜನೆಯೊಂದು ನಿಷ್ಪ್ರಯೋಜಕವಾಗುವ ಭೀತಿ ವ್ಯಕ್ತವಾಗುತ್ತಿದೆ.
ಕೋಟೆ-ಮಟ್ಟು ಗ್ರಾಮವು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಈ ನೂತನ ಸೇತುವೆಯು ಹೊಸ ಮೈಲುಗಲ್ಲಾಗಲಿದೆ ಎಂದೇ ಈ ಭಾಗದ ಜನ ಭಾವಿಸಿದ್ದರು.
ಆದರೆ ಸರಕಾರದ ವಿಳಂಬ ನೀತಿ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಬೃಹತ್ ಯೋಜನೆಯೊಂದು ಹಳ್ಳ ಹಿಡಿಯುವ ಆತಂಕ ಮೂಡುತ್ತಿದೆ.
ಪಾದಚಾರಿ ಮಾರ್ಗವನ್ನೂ ಹೊಂದಿರುವ ಈ ಸೇತುವೆಯ ನಿರ್ಮಾಣದ ಕಾಮಗಾರಿಯನ್ನು 2019ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
2020ರ ಮೇ ತಿಂಗಳ ಅಂತ್ಯದೊಳಗಡೆ ಪೂರ್ಣಗೊಳಿಸಲಾಗುತ್ತದೆ ಎಂಬ ಭರವಸೆ ನೀಡಲಾಗಿತ್ತು.
ಸೇತುವೆಯ ಕಾಮಗಾರಿಯು ಕೊರೊನಾ ಲಾಕ್ ಡೌನ್ ಸಂದರ್ಭ ಆಮೆಗತಿಯಲ್ಲಿ ಸಾಗುತ್ತಾ ಬಂದಿತ್ತು. ಕಳೆದ ಸಾಲಿನ ಮಳೆಗಾಲಕ್ಕೂ ಮುನ್ನವೇ ಈ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸುವ ಇಂಗಿತವನ್ನು ಎಂಜಿನಿಯರಿಂಗ್ ವಿಭಾಗದವರು ವ್ಯಕ್ತಪಡಿಸಿದ್ದರು. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಎಂಬುವುದೇ ವಿಪರ್ಯಾಸದ ಸಂಗತಿ.
Kshetra Samachara
14/03/2022 09:15 pm