ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು - ಕಾರ್ಕಳ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಎನ್ಎಚ್ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದ್ದು, ಭೂಮಿ ನೀಡಿರುವ ಭೂ ಮಾಲೀಕರಿಗೆ ಅಧಿಕಾರಿಗಳಿಂದ ವಂಚನೆಯಾಗುತ್ತಿದೆ ಎಂದು ಸಂತ್ರಸ್ತ ಭೂ ಮಾಲೀಕರು ಆರೋಪಿಸಿದ್ದಾರೆ.
ಈ ಬಗ್ಗೆ ಭೂ ಮಾಲೀಕರ ಹೋರಾಟ ಸಮಿತಿ ಮುಖಂಡ ಬ್ರಿಜೇಶ್ ಶೆಟ್ಟಿ ಮಿಜಾರು ಮಾತನಾಡಿ, ಎನ್ಎಚ್ ಅಧಿಕಾರಿಗಳು ಪ್ರಭಾವಿಗಳ, ಭೂಮಾಫಿಯಾ ಒತ್ತಡಕ್ಕೆ ಮಣಿದು ಅವರಿಗೆ ತಕ್ಕಂತೆ ಅಲೈನ್ಮೆಂಟ್ಗಳಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತಿದೆ. ಇದೀಗ ನಮ್ಮ ಕೃಷಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ 8 -10 ಪಟ್ಟು ಕಡಿಮೆ ಬೆಲೆ ನೀಡಲಾಗುತ್ತಿದೆ. ರಾ.ಹೆ. ಇಲಾಖೆ, ಭೂ ಮಾಲೀಕರಿಗೆ ಮಾಡುತ್ತಿರುವ ಅನ್ಯಾಯ, ವಂಚನೆ ಹಾಗೂ ಹಗರಣ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಈ ವಿಚಾರ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಅವರು ಸೂಕ್ತ ಬೆಲೆ ನಿಗದಿಗೆ ಶಿಫಾರಸ್ಸು ಮಾಡಿದರೂ ಅದಕ್ಕೆ ಬೆಲೆ ಕೊಡದೆ ನಮ್ಮ ಮನವಿಯನ್ನು ಎನ್ಎಚ್ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಸಂಸದ ನಳಿನ್ ಅವರನ್ನೂ ಸಂಪರ್ಕಿಸಿದ್ದೇವೆ. ಆದರೆ, ಯಾವುದೇ ಪರಿಹಾರ ದೊರಕಿಲ್ಲ.
ಈ ಭಾಗದ 250 ಭೂ ಮಾಲೀಕರು ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇಲ್ಲಿವರೆಗೆ ಅವಾರ್ಡ್ ಆಗಿರುವ ಶೇ. 90ರಷ್ಟು ಕೃಷಿ ಭೂಮಿಗೆ ತಡೆಯಾಜ್ಞೆ ಪಡೆಯಲಾಗಿದೆ. ಆದರೆ, ಪ್ರತಿಕ್ರಿಯೆ ನೀಡಿಲ್ಲ. ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೂ ಮನವಿ ಸಲ್ಲಿಸಿದ್ದೆವು. ಅವರಿಂದಲೂ ಸ್ಪಂದನವಿಲ್ಲ ಎಂದರು.
Kshetra Samachara
19/03/2022 06:39 pm