ಬಂಟ್ವಾಳ: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ, ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೋಜಿತಕ್ಕೆ ನೋಂದಾಯಿತ ಸದಸ್ಯರು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದು, ಬಂಟ್ವಾಳ ತಾಲೂಕಿನ 120 ಮಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಉದ್ಯೋಗದಲ್ಲಿ ಸಮಾನತೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಧಾರಣೆ, ಗುತ್ತಿಗೆ ವ್ಯವಸ್ಥೆಗೆ ಕೊನೆ, ಸೇವಾ ಭದ್ರತೆ, ಸಮಾನ ವೇತನ, ಸಮಾನ ಸೇವಾ ನಿಯಮಗಳು, ಕೋವಿಡ್ ಪ್ಯಾಕೇಜ್ ಸಹಿತ ಹಲವು ಬೇಡಿಕೆ ಮುಂದಿಟ್ಟು ಹೋರಾಟವನ್ನು ನಿಗದಿಗೊಳಿಸಲಾಗಿದ್ದು, ಚಪ್ಪಾಳೆ ಬೇಡ ಸೌಲಭ್ಯಗಳನ್ನು ಕೊಡಿ ಎಂಬ ಘೋಷವಾಕ್ಯದೊಂದಿಗೆ ಗುರುವಾರ ಮನೆಯಲ್ಲೇ ಕುಳಿತು ಮುಷ್ಕರವನ್ನು ನಡೆಸಲಾಯಿತು. ಬುಧವಾರ ಕೆಲಸಕ್ಕೆ ಹಾಜರಾಗಿದ್ದ ವೇಳೆ ಪ್ಲೇಕಾರ್ಡ್ ಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.
ಗುತ್ತಿಗೆ ಆಧರಿತ ಸುಮಾರು 16 ಗ್ರೂಪ್ ಡಿ ನೌಕರರು, 4 ಸ್ಟಾಫ್ ನರ್ಸ್ ಮತ್ತು 2 ಲ್ಯಾಬ್ ಟೆಕ್ನಿಶಿಯನ್ನುಗಳು ಕೆಲಸಕ್ಕೆ ಮುಷ್ಕರ ಹಿನ್ನೆಲೆಯಲ್ಲಿ ಬಾರದೇ ಇದ್ದ ಕಾರಣ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆ ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ವ್ಯತ್ಯಯವಾಗಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ನಾಲ್ವರು ದಿನಗೂಲಿ ನೌಕರರು ಆಸ್ಪತ್ರೆಯ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಒಟ್ಟು 32 ಡಿ ಗ್ರೂಪ್ ಖಾಯಂ ನೌಕರರು ಇರಬೇಕಾಗಿದ್ದ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 2 ಕಾಯಂ ನೌಕರರು ಇದ್ದರೆ, 16 ಗುತ್ತಿಗೆ ಆಧರಿತ ನೌಕರರಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದ್ದಾರೆ.
Kshetra Samachara
24/09/2020 04:23 pm