ಬೈಂದೂರು: ಮೂರು ಹೆಣ್ಮಕ್ಕಳು, ಎರಡು ಗಂಡು, ಕುಟುಂಬಕ್ಕೆ ಆಧಾರವಾಗಿದ್ದ ಮೊದಲನೇ ಮಗ ಅಪಘಾತವೊಂದರಲ್ಲಿ ಬೆನ್ನುಹುರಿಗೆ ಏಟಾಗಿ 5 ವರ್ಷದಿಂದ ಬೆಡ್ ರಿಡನ್. ಹೊರೆ ಹೊರಬೇಕಾದವನ ಹೊರೆಯನ್ನೇ ಕುಟುಂಬ ಹೆಗಲೇರಿಸಿಕೊಂಡಿರುವಾಗಲೇ ಬಂದೆರಗಿತ್ತು ಇನ್ನೊಂದು ವಿಪತ್ತು. ವಿಪರೀತ ಗಾಳಿ ಮಳೆಗೆ ಮರವೊಂದು ಬಿದ್ದ ಪರಿಣಾಮ ಅವರ ಮನೆಯೂ ಸರ್ವನಾಶವಾಯಿತು.
ಬೈಂದೂರು ತಾಲೂಕಿನ ಬೈಂದೂರು ಹೃದಯ ಭಾಗದಿಂದ ಕೂಗಳತೆಯ ದೂರದಲ್ಲಿರುವ ದರಖಾಸ್ತು ಕಾಲೋನಿಯ ನಿವಾಸಿ ಚಂದು ಎಂಬುವರ ಕುಟುಂಬದ ಗೋಳಿನ ಕತೆಯಿದು.
ಮೊದಲೇ ಮಗ ಪ್ರಕಾಶ್ ಹಾಸಿಗೆ ಹಿಡಿದಿದ್ದಾನೆ. ಜೊತೆಗೆ ಕೊರೊನಾ, ಇನ್ನೊಂದು ಕಡೆ ಪ್ರಕೃತಿ ವಿಕೋಪ. ಎಲ್ಲದರ ನಡುವೆ ದಿಕ್ಕು ಕಾಣದಾದ ಕುಟುಂಬಕ್ಕೆ ಗಂಜಿ ಕೇಂದ್ರದ ನೆಪದಲ್ಲಿ ಆರು ತಿಂಗಳು ಆಶ್ರಯ ನೀಡಿದ್ದು, ಅಂಬೇಡ್ಕರ್ ಭವನ. ಬಳಿಕ ಮತ್ತೆ ಸಣ್ಣದಾದ ಒಂದು ಶೆಡ್ಡಿನಲ್ಲಿ ಅವರ ಜೀವನ.
ಮನೆ ಮೇಲೆ ಮರ ಬಿದ್ದ ತಕ್ಷಣ ಆಗಿನ ಡಿಸಿ ಜಗದೀಶ್, ಕೇಂದ್ರದ ಎನ್.ಡಿ.ಆರ್.ಎಫ್ ತಂಡ ಭೇಟಿ ನೀಡಿ ತಕ್ಷಣ "ಮನೆ ಮಂಜೂರು" ಆದೇಶ ನೀಡಿ ಹೊರಟು ಹೋದರು. ಆದರೆ ಇದುವರೆಗೆ ಆದೇಶ ಅನುಷ್ಟಾನವಾಗಲೇ ಇಲ್ಲ.
ಮನೆಯೂ ಇಲ್ಲದ, ಕೂಲಿಕೆಲಸ ಮಾಡಿ ವಿಶ್ರಾಂತಿಯಲ್ಲಿರುವ ಅಣ್ಣ, ಹಿರಿಯರಾದ ಅಪ್ಪ ಅಮ್ಮನ ಹೊಟ್ಟೆ ಹೊರೆಯುವ ಹೆಣ್ಮಕ್ಕಳ ಪರಿಸ್ಥಿತಿ ಹೇಳತೀರದಾಗಿದೆ.
ಇನ್ನಾದರೂ ಶಾಸಕರು, ಸಂಸದರು ಇತ್ತ ಕಡೆ ಗಮನ ಹರಿಸಬೇಕಿದೆ. ಸರ್ಕಾರ, ಜಿಲ್ಲಾಡಳಿತ ಕೇಂದ್ರದ ಅನುದಾನಕ್ಕೆ ಕಾಯದೇ ಅನಾಥವಾಗಿರುವ ಕುಟುಂಬಕ್ಕೆ ಆಸರೆ ನೀಡಬೇಕಿದೆ.
PublicNext
01/09/2022 10:33 am